ಬೆಂಗಳೂರು :ರಾಜಧಾನಿಯ ವಿಧಾನಸೌಧದಿಂದ ಹಿಡಿದು ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಲ್ಲಿ ನಾಳೆ ಬೆಳಗ್ಗೆ 11 ಗಂಟೆ ಸಮಯಕ್ಕೆ ಲಕ್ಷಕಂಠಗಳಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದೆ.
ಈ ಕಾರ್ಯಕ್ರಮದಲ್ಲಿ ಸ್ವೀಕರಿಸಬೇಕಾಗಿರುವ ಸಂಕಲ್ಪ ಮತ್ತು ಸ್ವರೂಪ ಕುರಿತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ವಿವರಿಸಿದ್ದಾರೆ. ಗೀತಗಾಯನದಲ್ಲಿ ಭಾಗವಹಿಸುವವರೆಲ್ಲರೂ ಬೆಳಗ್ಗೆ 10:45ಕ್ಕೆ ತಮಗೆ ನಿಗದಿಪಡಿಸಿದ ಸ್ಥಳಗಳಲ್ಲಿ ಹಾಜರಿರಬೇಕು.
ಬೆಳಗ್ಗೆ 11 ಗಂಟೆಗೆ ಸ್ವಾಗತ ನುಡಿಗಳೊಂದಿಗೆ ಕಾರ್ಯಕ್ರಮ ಆರಂಭವಾಗುತ್ತದೆ. ಮೊದಲಿಗೆ ನಾಡಗೀತೆ ಹಾಡಲಾಗುವುದು. ಆ ನಂತರ ಈಗಾಗಲೇ ಸೂಚಿಸಿರುವ ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’, ನಿಸಾರ್ ಅಹಮ್ಮದ್ರವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಡಾ. ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಈ ಮೂರು ಗೀತೆಗಳು ಏಕಕಾಲದಲ್ಲಿ ರಾಜ್ಯಾದ್ಯಂತ ಮೊಳಗಲಿವೆ.