ಬೆಂಗಳೂರು: ಮೆಟ್ರೋ ಸುರಂಗ ಮಾರ್ಗ ನಿರ್ಮಾಣಕ್ಕಾಗಿ ವಿಧಾನಸೌಧದ ಮುಂಭಾಗದಿಂದ ಸ್ಥಳಾಂತರ ಮಾಡಿದ್ದ ಮಾಜಿ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರು ಪ್ರತಿಮೆಯನ್ನು ನೆಹರು ಜನ್ಮದಿನದೊಳಗೆ ಮೂಲ ಸ್ಥಳಕ್ಕೆ ಮರು ಸ್ಥಳಾಂತರ ಮಾಡುವುದಾಗಿ ವಿಧಾನಪರಿಷತ್ ಗೆ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಭರವಸೆ ನೀಡಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಪ್ರತಿಮೆ ಪುನರ್ ಪ್ರತಿಷ್ಠಾಪಿಸುವ ಕುರಿತು ಕಾಂಗ್ರೆಸ್ ಸದಸ್ಯ ಗೋವಿಂದರಾಜು ಗಮನ ಸೆಳೆಯುವ ಸೂಚನೆ ಮಂಡಿಸಿದರು. ಈ ಕುರಿತು ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸದನಕ್ಕೆ ಉತ್ತರ ನೀಡಿದರು. ಶ್ರೀನಿವಾಸ ಪೂಜಾರಿ ಅವರ ಉತ್ತರಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಮೆಟ್ರೋ ಕಾಮಗಾರಿಯಿಂದ ವಿಧಾನಸೌಧದ ಮುಂಭಾಗದಲ್ಲಿದ್ದ ನೆಹರು ಪ್ರತಿಮೆಯನ್ನು ವಿಧಾನಸೌಧದ ಪಶ್ಚಿಮ ಭಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಮೆಟ್ರೋ ಕಾಮಗಾರಿ ಮುಗಿದ ಬಳಿಕ ಪುನಃ ಅಲ್ಲೇ ಪ್ರತಿಷ್ಠಾಪನೆ ಮಾಡುವ ಆದೇಶ ಹೊರಡಿಸಿದ್ದಾರೆ. ಆದರೆ, ಈ ಬಗ್ಗೆ ಪರಿಶೀಲನೆ ಮಾಡುವ ಅವಶ್ಯಕತೆ ಏನಿಲ್ಲ, ಕೂಡಲೇ ಪ್ರತಿಷ್ಠಾಪನೆ ಮಾಡುವ ಉತ್ತರ ಕೊಡಿ ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು.