ಬೆಂಗಳೂರು : ಕಾವೇರಿ ನದಿ ತಪ್ಪಲಿನಲ್ಲಿ ಕೈಗಾರಿಕಾ ಘಟಕ ಸ್ಥಾಪಿಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ನೀಡಿದ್ದ ಆದೇಶವನ್ನು ಪಾಲಿಸುವಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಫಲವಾಗಿದ್ದು, ಕೆಎಸ್ ಪಿಸಿಬಿ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದ ಕೆ.ಪಿ ಕಾರ್ಯಪ್ಪ ಎಂಬುವರು ಕಾವೇರಿ ನದಿ ಸಮೀಪದಲ್ಲಿ ನಿಯಮ ಉಲ್ಲಂಘಿಸಿ ಕಾಫಿ ಕ್ಯೂರಿಂಗ್ ಘಟಕ ಆರಂಭಿಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು.
ಈ ವೇಳೆ ಕೆಎಸ್ ಪಿಸಿಬಿ ಪರ ವಕೀಲರು ಕಾರಣಾಂತರಗಳಿಂದ ಕೋರ್ಟ್ ಹಿಂದಿನ ಆದೇಶದಂತೆ ಸರ್ವೇ ನಡೆಸಿ ವರದಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ನ್ಯಾಯಾಲಯ ಕಳೆದ ಆಗಸ್ಟ್ 5 ರಂದು ಸರ್ವೇ ನಡೆಸಿ ವರದಿ ನೀಡುವಂತೆ ನಿರ್ದೇಶಿಸಿತ್ತು. ಆದರೆ ಈವರೆಗೂ ಸರ್ವೇ ನಡೆಸಿಲ್ಲ. ಇದೀಗ ಸರ್ವೇ ನಡೆಸುತ್ತೇವೆ ಎನ್ನುತ್ತೀರಿ, ಇಂತಹ ನಡವಳಿಕೆಯನ್ನು ಕೋರ್ಟ್ ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿತು.
ಅಲ್ಲದೇ, ಕೆಎಸ್ ಪಿಸಿಬಿ ಸದಸ್ಯ ಕಾರ್ಯದರ್ಶಿ ಸೆಪ್ಟೆಂಬರ್ 18 ರೊಳಗೆ ಸರ್ವೇ ನಡೆಸಿ ವರದಿ ಸಲ್ಲಿಸಬೇಕು, ಹಾಗೆಯೇ ಕೋರ್ಟ್ ಆದೇಶ ಪಾಲಿಸದಿರುವ ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಅಡಿ ಕ್ರಮ ಜರುಗಿಸಬಾರದೇಕೆ ಎಂಬುದಕ್ಕೆ ವಿವರಣೆ ನೀಡಬೇಕು ಎಂದು ಸೂಚಿಸಿ ವಿಚಾರಣೆಯನ್ನು ಸೆಪ್ಟೆಂಬರ್ 21ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ವಿರಾಜಪೇಟೆಯ ನಾಲ್ಕೇರಿ ಗ್ರಾಮದ ಮುಸ್ತಾಫ ಹಾಗೂ ಮಂಜುನಾಥ್ ಎಂಬುವರು ಕಾವೇರಿ ನದಿಗೆ ಹತ್ತಿರದಲ್ಲಿ ಕಾಫಿ ಕ್ಯೂರಿಂಗ್ ಘಟಕ ಸ್ಥಾಪಿಸಲು ಕಟ್ಟಡ ನಿರ್ಮಿಸಿದ್ದಾರೆ. ಇದು ನಿಯಮಗಳಿಗೆ ವಿರುದ್ಧವಾಗಿದೆ. ಪ್ರವಾಹದ ಸಂದರ್ಭಗಳಲ್ಲಿ ನದಿಯ ಗರಿಷ್ಠ ಪ್ರವಾಹದ ಜಾಗದಿಂದ 500 ಮೀಟರ್ ದೂರದವರೆಗೆ ಮನೆ, ವಾಣಿಜ್ಯ ಅಥವಾ ಕೈಗಾರಿಕಾ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ ಎಂಬ ನಿಯಮ ಉಲ್ಲಂಘಿಸಲಾಗಿದೆ ಎಂದು ಇದೇ ಗ್ರಾಮದ ಕಾರ್ಯಪ್ಪ ಎನ್ನುವರು ಅರ್ಜಿ ಸಲ್ಲಿಸಿದ್ದಾರೆ.
ಕಳೆದ ಆಗಸ್ಟ್ 5 ರಂದು ಅರ್ಜಿ ವಿಚಾರಣೆ ನಡೆಸಿದ್ದ ಪೀಠ, ಅರ್ಜಿ ಇತ್ಯರ್ಥವಾಗುವವರೆಗೂ ಉದ್ದೇಶಿತ ಚಟುವಟಿಕೆ ಕೈಗೊಳ್ಳಬಾರದೆಂದು ನಿರ್ದೇಶಿಸಿತ್ತು. ಹಾಗೆಯೇ ನಿರ್ಮಾಣವಾಗಿರುವ ಕಟ್ಟಡ ನದಿಯ ಗರಿಷ್ಠ ಪ್ರವಾಹ ಗುರುತಿಸಿರುವ ಜಾಗದಿಂದ 500 ಮೀಟರ್ ದೂರದಲ್ಲಿದೆಯೇ ಎಂಬುದನ್ನು ತಿಳಿಯಲು, ಸರ್ವೇ ನಡೆಸಿ ವರದಿ ನೀಡುವಂತೆ ಕೆಎಸ್ ಪಿಸಿಬಿಗೆ ನಿರ್ದೇಶಿಸಿತ್ತು. ಆದರೆ, ಮಂಡಳಿ ತಿಂಗಳಾದರೂ ವರದಿ ಸಲ್ಲಿಸದೇ ಇರುವುದು ಹೈಕೋರ್ಟ್ ಅಸಮಾಧಾನಕ್ಕೆ ಕಾರಣವಾಗಿದೆ.