ಬೆಂಗಳೂರು : ಲಾಕ್‌ಡೌನ್ ಬಳಿಕ ಬಹುತೇಕ ಆನ್‌ಲೈನ್ ಕಲಾಪಕ್ಕೆ ಸೀಮಿತಗೊಂಡಿದ್ದ ಹೈಕೋರ್ಟ್‌ನಲ್ಲಿ ಇಂದಿನಿಂದ ಫಿಸಿಕಲ್ ಕಲಾಪಗಳು ಎಂದಿನಂತೆ ನಡೆಯಲಿವೆ.
ಹೈಕೋರ್ಟ್‌ನಲ್ಲಿ ಇಂದಿನಿಂದ ಮುಕ್ತ ಕಲಾಪ ಆರಂಭ
ಹೈಕೋರ್ಟ್‌ನಲ್ಲಿ ಇಂದಿನಿಂದ ಫಿಸಿಕಲ್ (ಮುಕ್ತ ನ್ಯಾಯಾಲಯ) ಕಲಾಪಗಳು ಎಂದಿನಂತೆ ಆರಂಭವಾಗಲಿವೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ಆದೇಶದ ಮೇರೆಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಅವರು ನಿನ್ನೆ ಪ್ರಕಟಣೆ ಹೊರಡಿಸಿದ್ದಾರೆ. ಅದರಲ್ಲಿ, ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಎಸ್ಒಪಿ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ. ಕೆಲಸದ ದಿನಗಳಂದು ಹೈಕೋರ್ಟ್ ನ ಎಲ್ಲಾ ಪೀಠಗಳಲ್ಲಿ ವಕೀಲರು ಬೆಳಗ್ಗೆ 10:30 ರಿಂದ ಸಂಜೆ 4:00ರವರೆಗೆ ಭಾಗವಹಿಸಬಹುದು.
ಆದರೆ, ಕೋರ್ಟ್ ಆವರಣದಲ್ಲಿ ವಕೀಲರಿಗೆ ಹಾಕಿರುವ ಕುರ್ಚಿಗಳಲ್ಲಿ ಅರ್ಧದಷ್ಟನ್ನು ತೆಗೆಯಬೇಕು. ಆಗ ಕೋರ್ಟ್ ಒಳಗೆ ವಕೀಲರ ದಟ್ಟಣೆ ತಗ್ಗಲಿದೆ. ಹಾಗೆಯೇ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನೆರವಾಗಲಿದೆ. ಜೊತೆಗೆ ಸುರಕ್ಷತೆ ಕಾರಣಕ್ಕಾಗಿ ಹೈಕೋರ್ಟ್ ಕಟ್ಟಡದೊಳಗೆ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ನೋಟರಿ, ಜೆರಾಕ್ಸ್ ಹಾಗೂ ಟೈಪಿಸ್ಟ್‌ಗಳಿಗೆ ಸದ್ಯಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.