ಕರ್ನಾಟಕ

karnataka

ETV Bharat / state

ವಿಪತ್ತು ನಿರ್ವಹಣೆ ಯೋಜನೆ ರೂಪಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - ವಿಪತ್ತು ನಿರ್ವಹಣಾ ಕಾಯ್ದೆ ಅನುಷ್ಠಾನ

ವಿಪತ್ತು ನಿರ್ವಹಣೆ ಯೋಜನೆ ರೂಪಿಸಲು ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಮುಂದಿನ ಮೂರು ವಾರಗಳಲ್ಲಿ ಉಪ ಸಮಿತಿ ರಚಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

High court
High court

By

Published : Jul 24, 2020, 11:21 AM IST

ಬೆಂಗಳೂರು : ರಾಜ್ಯದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲು ಉಪ ಸಮಿತಿ ರಚಿಸಿ ಯೋಜನೆಗಳನ್ನು ರೂಪಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ವಿಪತ್ತು ನಿರ್ವಹಣಾ ಕಾಯ್ದೆ ಅನುಷ್ಠಾನಗೊಳಿಸವಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ವಿಫಲವಾಗಿದೆ. ಯೋಜನೆಗಳನ್ನು ಪರಿಷ್ಕರಿಸುವಲ್ಲಿಯೂ ಹಿಂದುಳಿದಿದೆ. ಹೀಗಾಗಿ ಕೊರೊನಾ ನಿಯಂತ್ರಿಸಲು ದೀರ್ಘಕಾಲೀನ ಯೋಜನೆಗಳನ್ನು ರೂಪಿಸುವಂತೆ ನಿರ್ದೇಶಿಸಬೇಕು ಎಂದು ಕೋರಿ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ಎ. ಮಲ್ಲಿಕಾರ್ಜುನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರ ಮಲ್ಲಿಕಾರ್ಜುನ್ ಖುದ್ದು ವಾದಿಸಿ, ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 23, 31 ರ ಪ್ರಕಾರ ರಾಜ್ಯ ಮತ್ತು ಜಿಲ್ಲಾ ಪ್ರಾಧಿಕಾರಗಳು ಕಾಲಕ್ಕೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಿ ಪರಿಷ್ಕರಿಸಬೇಕು. ಆದರೆ, ರಾಜ್ಯದ ಬಳಿ ಯೋಜನೆಗಳ ರೂಪುರೇಷೆಯೇ ಇಲ್ಲ, ದೂರದೃಷ್ಟಿಯೂ ಇಲ್ಲ. ಕೆಲ ದೇಶಗಳಲ್ಲಿ ನವೆಂಬರ್, ಡಿಸೆಂಬರ್ ತಿಂಗಳಲ್ಲೇ ಯೋಜನೆ ರೂಪಿಸಲಾಗಿದೆ. ನಮ್ಮವರು ಮಾತ್ರ ಜುಲೈ ಕಳೆಯುತ್ತ ಬಂದಿದ್ದರೂ ಯೋಜನೆಯನ್ನೇ ರೂಪಿಸಿಲ್ಲ. ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲು ಸೂಕ್ತ ಯೋಜನೆ ರೂಪಿಸಲು ನಿರ್ದೇಶಿಸಬೇಕು ಎಂದು ಕೋರಿದರು.

ಅರ್ಜಿದಾರರ ಕೋರಿಕೆ ಪರಿಗಣಿಸಿದ ಪೀಠ, ಸರ್ಕಾರ ಕಾಯ್ದೆ ನಿಯಮಗಳ ಅನುಸಾರ ಯೋಜನೆ ರೂಪಿಸಲು ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಮುಂದಿನ ಮೂರು ವಾರಗಳಲ್ಲಿ ಉಪ ಸಮಿತಿಯನ್ನು ರಚಿಸಬೇಕು. ಈ ಸಮಿತಿ ಯೋಜನೆಗಳನ್ನು ರೂಪಿಸಿ ಪರಿಷ್ಕರಿಸಬೇಕು. ಹಾಗೆಯೇ ಜಿಲ್ಲಾ ಸಮಿತಿಗಳು ಕೂಡ ಯೋಜನೆಗಳನ್ನು ರೂಪಿಸಬೇಕು ಎಂದು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿತು.

ABOUT THE AUTHOR

...view details