ಶೀಘ್ರವೇ ಸರ್ಕಾರಿ ಆಸ್ಪತ್ರೆಗಳ ಸುಧಾರಣೆ ಹಾಗೂ ವೈದ್ಯಾಧಿಕಾರಿಗಳ ನೇಮಕಾತಿ: ಸಚಿವ ಶ್ರೀರಾಮುಲು
ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿ ಕಾರ್ಯ ಹಾಗೂ ವೈದ್ಯರ ನೇಮಕಾತಿಯನ್ನು ಶೀಘ್ರದಲ್ಲಿಯೇ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಕಾರವಾರ:ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳ ಸುಧಾರಣೆ ಹಾಗೂ ವೈದ್ಯಾಧಿಕಾರಿಗಳ ನೇಮಕಾತಿಯನ್ನು ಶೀಘ್ರದಲ್ಲಿಯೇ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಕ್ರಮಗಳ ಕುರಿತ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಆಸ್ಪತ್ರೆಗಳ ಸ್ವಚ್ಛತೆ, ಸೌಕರ್ಯ, ವೈದ್ಯರ ಕೊರತೆಗೆ ಸಂಬಂಧಪಟ್ಟಂತೆ ದೂರುಗಳು ಸಾಕಷ್ಟು ಪ್ರಮಾಣದಲ್ಲಿ ಕೇಳಿ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗಳನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸಮರ್ಥವಾಗಿ ತಡೆಗಟ್ಟುವಲ್ಲಿ ಯಶಸ್ವಿಯಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ವೈದ್ಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ, ಆರೋಗ್ಯಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿ ವರ್ಗದವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಅಭಿನಂದನೆಗೆ ಪಾತ್ರರಾಗಿದ್ದಾರೆ ಎಂದು ಶ್ಲಾಘಿಸಿದರು.
ಜಿಲ್ಲೆಯಲ್ಲಿ 9 ಸಾವಿರ ಗರ್ಭಿಣಿ ಮಹಿಳೆಯರಿದ್ದು, ಅವರ ಹೆರಿಗೆ ಸಮಯದಲ್ಲಿ ಸೋಂಕಿತ ಲಕ್ಷಣ ಕಂಡು ಬಂದಲ್ಲಿ ಮಾತ್ರ ಕೋವಿಡ್ ಪರೀಕ್ಷೆ ಮಾಡಬೇಕೇ ಹೊರತು ವಿನಾ ಕಾರಣ ಪರೀಕ್ಷೆ ಮಾಡದಂತೆ ಸೂಚಿಸಿದರು.
ಅದೇ ರೀತಿ ಕೋವಿಡ್ ನೆಪದಲ್ಲಿ ಬೇರೆ ಕಾಯಿಲೆಗಳನ್ನು ನಿರ್ಲಕ್ಷ್ಯ ಮಾಡದೇ ಕಾರ್ಯನಿರ್ವಹಿಸಬೇಕು ಮತ್ತು ಅಂಕೋಲಾದಲ್ಲಿ ಸ್ತ್ರೀ ರೋಗ ತಜ್ಞರನ್ನು ಕೂಡಲೇ ನೇಮಕ ಮಾಡಿಕೊಳ್ಳಲು ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.
ಇನ್ನು ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಚರ್ಚಿಸಲಾಗಿದ್ದು, ಹೊಸ ಅಧ್ಯಯನ ಮಾಡಿ ಲಸಿಕೆ ಕಂಡು ಹಿಡಿಯಲು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.