ಪರೀಕ್ಷೆ ಬರೆದ ವಿದ್ಯಾರ್ಥಿಗೆ ಕೊರೊನಾ: ಹಾಸನ ಜಿಲ್ಲೆಯಲ್ಲಿಂದು 14 ಸೋಂಕಿತರು ಪತ್ತೆ
ಹಾಸನ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಆತಂಕ ಮನೆಮಾಡಿದೆ. ಜೊತೆಗೆ ಹೊಸ 14 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಹಾಸನ:ಅರಕಲಗೂಡು ತಾಲೂಕಿನ ವಿದ್ಯಾರ್ಥಿಯನ್ನು ಪರೀಕ್ಷೆಯ ಬಳಿಕ ತಪಾಸಣೆಗೆ ಒಳಪಡಿಸಿದಾಗ ಬಾಲಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಹಿಂದೆ ಡೆಂಗ್ಯೂನಿಂದ ಬಳಲುತ್ತಿದ್ದ ವಿದ್ಯಾರ್ಥಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡದೆ ಇದ್ದಿದ್ದೇ ಈ ಆತಂಕಕ್ಕೆ ಮುಖ್ಯ ಕಾರಣ. ಸದ್ಯ ವಿದ್ಯಾರ್ಥಿಯನ್ನು ತಪಾಸಣೆ ಮಾಡಿದ ದಾದಿಯರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪರೀಕ್ಷಾ ಕೇಂದ್ರಕ್ಕೆ ಅರಕಲಗೂಡು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ, ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ವಿದ್ಯಾರ್ಥಿ ಟ್ರಾವೆಲ್ ಹಿಸ್ಟರಿ:
ಈಗಾಗಲೇ ಎರಡು ವಿಷಯದ ಪರೀಕ್ಷೆ ಬರೆದಿರುವ ಬಾಲಕ ಇಂದು ಕೂಡ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದಾನೆ. ಅಲ್ಲದೆ ಈತನೊಂದಿಗೆ 10 ವಿದ್ಯಾರ್ಥಿಗಳು ಊರಿನಿಂದ ಬಂದಿದ್ದಾರೆ ಎನ್ನಲಾಗಿದೆ. ಅಲ್ಲದೆ ಆ 10 ವಿದ್ಯಾರ್ಥಿಗಳು 19 ಜನ ವಿದ್ಯಾರ್ಥಿಗಳ ಜೊತೆ ಪರೀಕ್ಷೆ ಬರೆದಿದ್ದಾರೆ ಎಂದು ಶಿಕ್ಷಕರೊಬ್ಬರು ತಿಳಿಸಿದ್ದಾರೆ.
14 ಪ್ರಕರಣಗಳು ಪತ್ತೆ:
ಜಿಲ್ಲೆಯಲ್ಲಿಂದು 14 ಪ್ರಕರಣಗಳು ಪತ್ತೆಯಾಗಿದ್ದು ಅರಕಲಗೂಡಿನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿ ಸೇರಿದಂತೆ ಮೂರು ಪ್ರಕರಣ ಮತ್ತು ಹೊಳೆನರಸೀಪುರದಲ್ಲಿ ನಾಲ್ಕು ಪ್ರಕರಣಗಳು ಪತ್ತೆಯಾಗಿದೆ. ಇದಲ್ಲದೆ ಅರಸೀಕೆರೆ ಸೋಂಕಿತ ಪೊಲೀಸ್ ಸಿಬ್ಬಂದಿಯಿಂದ ಈಗ ಆತನ ಕುಟುಂಬದ ಇಬ್ಬರಿಗೆ ಸೋಂಕು ತಗುಲಿದೆ.
ಮೊನ್ನೆ ಜ್ವರ ಅಂತ ಊರಿಗೆ ಮರಳಿದ್ದ ಅರಸೀಕೆರೆಯ ಓರ್ವ ಬಿಎಂಟಿಸಿ ಸಿಬ್ಬಂದಿಗೆ ಕಾಣಿಸಿಕೊಂಡಿದ್ದ ಸೋಂಕು ಆತನ ಕುಟುಂಬದ ಕುಟುಂಬಕ್ಕೂ ಹರಡಿದೆ. ಸೋಂಕಿತರ ಸಂಖ್ಯೆ 329ಕ್ಕೆ ಏರಿಕೆಯಾಗಿದೆ.