ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಭಾರತದ ಮುಸ್ಲಿಂ ಯೋಧರ ಕುರಿತು ನಡೆಯುತ್ತಿರುವ ಅಪಪ್ರಚಾರವನ್ನು ಪ್ರಧಾನಿ ನರೇಂದ್ರ ಮೋದಿ ತಡೆಯಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮುಸ್ಲಿಂ ಯೋಧರ ನಿಷ್ಠೆಯ ಕುರಿತು ಅಪಪ್ರಚಾರ ಮಾಡಿರುವುದು ಖಂಡನೀಯ. ಶತ್ರುಗಳ ವಿರುದ್ಧದ ಹೋರಾಟದಲ್ಲಿ ಭಾರತದ ಸೈನಿಕರು ಶೌರ್ಯ, ಧರ್ಮಾತೀತ ಮತ್ತು ಜಾತ್ಯಾತೀತವಾಗಿ ಹೋರಾಡುತ್ತಾರೆ. ಈ ಕುರಿತು ನಿವೃತ್ತ ರಕ್ಷಣಾ ಹಿರಿಯ ಅಧಿಕಾರಿಗಳು ಬರೆದಿರುವ ಬಹಿರಂಗ ಪತ್ರವನ್ನು ಮೋದಿ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಬೇಕು ಎಂದಿದ್ದಾರೆ.
ಮಾಜಿ ನಿವೃತ್ತ ಅಧಿಕಾರಿಗಳ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಮುಸ್ಲಿಂ ಸೈನಿಕರ ಕುರಿತು ವ್ಯವಸ್ಥಿತ ಸುಳ್ಳು ಪ್ರಚಾರಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಮೂರು ರಕ್ಷಣಾ ಪಡೆಗಳ ಸುಮಾರು 120 ನಿವೃತ್ತ ಅಧಿಕಾರಿಗಳು ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದು, ಇದು ಮಾಧ್ಯಮಗಳ ಮೂಲಕ ಸಾಕಷ್ಟು ದೊಡ್ಡ ಸಂಚಲನ ಮೂಡಿಸಿದೆ.
ಭಾರತೀಯ ಮುಸ್ಲಿಂ ಸೈನಿಕರ ಕುರಿತು ನಡೆಸಲಾಗುತ್ತಿರುವ ಈ ಸುಳ್ಳು ಪ್ರಚಾರ, ರಕ್ಷಣಾ ಪಡೆಗಳ ಆತ್ಮಸ್ಥೈರ್ಯ ಕುಗ್ಗಿಸುವುದಲ್ಲದೇ, ದೇಶದ ಭದ್ರತಗೂ ಅಪಾಯ ತಂದೊಡ್ಡಬಲ್ಲದು ಎಂದು ನಿವೃತ್ತ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿರುವುದನ್ನು ಕಾಂಗ್ರೆಸ್ ಪಕ್ಷ ಕೂಡ ಸಮರ್ಥಿಸಿಕೊಂಡು ಹೇಳಿಕೆಗಳನ್ನು ನೀಡಿದೆ.
ಜಿಡಿಪಿ ಕುಸಿತ:
ದಿನೇಶ್ ಗುಂಡೂರಾವ್ ಮಾಡಿರುವ ಇನ್ನೊಂದು ಟ್ವೀಟ್ ನಲ್ಲಿ ಜಿಡಿಪಿ ಕುಸಿತದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಮೋದಿ ಸರ್ಕಾರ ಕುಸಿದ ಆರ್ಥಿಕತೆಗೆ 'ಕೋವಿಡ್ ಕಂಟಕ-ದೇವರ ಆಟ'ದ ನೆಪ ಹೇಳುತ್ತಾ ಕುಳಿತಿದ್ದಾರೆ. ನೆರೆಯ ಬಾಂಗ್ಲಾ ಕೋವಿಡ್ ಮಧ್ಯೆಯೂ ಜಿಡಿಪಿಯಲ್ಲಿ ಭಾರತವನ್ನು ಹಿಂದಿಕ್ಕಿ ಸಾಗಿದೆ. ಮೋದಿಯವರ ಬಾಯಿ ಮಾತಿನ ಭರವಸೆ, ಕೆಲಸಕ್ಕೆ ಬರುವುದಿಲ್ಲ ಎಂಬ ಸತ್ಯವನ್ನು ನೆರೆ ರಾಷ್ಟ್ರ ಬಾಂಗ್ಲಾ ಈಗ ತೋರಿಸಿಕೊಟ್ಟಿದೆ. ಇನ್ನಾದರೂ ಭ್ರಮೆ ಬಿಡಿ ಮೋದಿ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.