ಬೆಂಗಳೂರು:''ಕಾಂಗ್ರೆಸ್ನ ರಾಹುಲ್ ಗಾಂಧಿಯವರ ಪೌರತ್ವ ಮುಟ್ಟುಗೋಲು ಹಾಕಿಕೊಂಡು ಅವರನ್ನು ಗಡೀಪಾರು ಮಾಡಬೇಕು'' ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಕರ್ತರ ಜೊತೆ ಮಾತನಾಡಿದ ಅವರು, ''ಇಲ್ಲಿ ಅಭದ್ರತೆ ಉಂಟು ಮಾಡುವುದು ಮತ್ತು ದೇಶಕ್ಕೆ ತೊಂದರೆ ಕೊಡಬೇಕೆಂಬ ಮನಸ್ಥಿತಿ ರಾಹುಲ್ ಗಾಂಧಿ ಅವರದು ಎಂದು ನನಗನಿಸುತ್ತದೆ. ಆದ್ದರಿಂದ ನಾನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಪತ್ರ ಬರೆಯಲಿದ್ದೇನೆ'' ಎಂದು ತಿಳಿಸಿದರು.
ರಾಹುಲ್ ಗಾಂಧಿ ವಿರುದ್ಧ ತೀವ್ರ ಆಕ್ರೋಶ:''ರಾಹುಲ್ ಗಾಂಧಿಯವರು ದ್ವಿ ಪೌರತ್ವ (ಡ್ಯುಯಲ್ ಸಿಟಿಜನ್ಶಿಪ್) ಹೊಂದಿದ್ದಾರೆ ಎಂಬ ಮಾಹಿತಿ ಇದೆ. ಸುಬ್ರಹ್ಮಣ್ಯನ್ ಸ್ವಾಮಿ ಅವರು ಇದನ್ನು ತಿಳಿಸಿದ್ದಾರೆ. ಇದರ ಪರಿಶೀಲನೆ ಮಾಡಿ ರಾಹುಲ್ ಗಾಂಧಿಯವರ ಪೌರತ್ವವನ್ನು ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದರು. ಅಲ್ಲದೇ ಅವರನ್ನು ಈ ದೇಶದಿಂದ ಗಡೀಪಾರು ಮಾಡಿದರೆ ಉತ್ತಮ'' ಎಂದು ತಿಳಿಸಿದರು. ಇಲ್ಲವಾದರೆ ಅವರು ದೇಶದಲ್ಲಿ ಅಭದ್ರತೆ ಉಂಟು ಮಾಡುವ ಎಲ್ಲ ಲಕ್ಷಣಗಳಿವೆ'' ಎಂದು ಅನುಮಾನ ವ್ಯಕ್ತಪಡಿಸಿದರು.
''ಸ್ವಾತಂತ್ರ್ಯ ಬಂದಾಗ ಅಧಿಕಾರ ಹಸ್ತಾಂತರದ ಸಂದರ್ಭದಲ್ಲಿ ಇದೇ ರಾಹುಲ್ ಗಾಂಧಿಯವರ ಮುತ್ತಜ್ಜನಿಗೆ ಆಗಿನ ಬ್ರಿಟಿಷರು ಸೆಂಗೋಲ್ (ರಾಜದಂಡ) ಕೊಟ್ಟಿದ್ದರು. ಆ ವಿಚಾರ ಚರಿತ್ರೆಯಲ್ಲಿ ಮುಚ್ಚಿ ಹೋಗಿತ್ತು. ಅದನ್ನು ಹೊರಕ್ಕೆ ತರುವ ಕೆಲಸವನ್ನು ಮೋದಿ ಮತ್ತು ಅಮಿತ್ ಶಾ ಅವರು ಮಾಡಿದ್ದು, ಅದನ್ನೂ ಹೊರಗಡೆ ಪ್ರಸ್ತಾಪ ಮಾಡಿದ್ದಾರೆ. ಇವೆಲ್ಲವನ್ನೂ ಗಮನಿಸಿದರೆ ರಾಹುಲ್ ಗಾಂಧಿಯವರ ತಲೆಯಲ್ಲಿ ಭಾರತೀಯ ವಿರೋಧಿ ಧೋರಣೆ ಇದೆ ಎಂಬುದು ಸ್ಪಷ್ಟವಾಗುತ್ತದೆ'' ಎಂದು ತಿಳಿಸಿದರು.