ವಿಜಯಪುರ:ಕೋವಿಡ್-19 ನಿಯಂತ್ರಣ ಹಾಗೂ ಮುಂಜಾಗೃತಾ ಕ್ರಮವಾಗಿ ಕೋವಿಡ್ ದೃಢಪಟ್ಟ ವ್ಯಕ್ತಿಗಳ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ ವ್ಯಕ್ತಿಗಳ ಕಾಂಟ್ಯಾಕ್ಟ್ ಟ್ರೇಸಿಂಗ್ ಆ್ಯಪ್ ಮತ್ತು ಕ್ವಾರಂಟೈನ್ ವಾಚ್ ಆ್ಯಪ್್ ತಂತ್ರಾಂಶಗಳ ಬಳಕೆ ಮಾಡಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಸವನಬಾಗೇವಾಡಿ ತಹಶೀಲ್ದಾರ್ ಕಾರ್ಯಲಯದ ಸಭಾ ಭವನದಲ್ಲಿ ನಡೆದ ಕೋವಿಡ್-19 ನಿಯಂತ್ರಣ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕ್ವಾರಂಟೈನ್ ವಾಚ್ ಆ್ಯಪ್ನಲ್ಲಿ ಫೋಟೋ ಅಪ್ ಲೋಡಿಂಗ್ ಕೆಲಸದ ಜವಾಬ್ದಾರಿ ವಹಿಸಿಕೊಂಡು ಸುಧಾರಣೆ ಮಾಡಬೇಕು. ಕೋವಿಡ್ ದೃಢಪಟ್ಟ ವ್ಯಕ್ತಿಗಳ ಮತ್ತು ಅವರೊಂದಿಗೆ ನೇರ ಸಂಪರ್ಕ ಹೊಂದಿರುವ ಕನಿಷ್ಠ 10 ಜನ ಪ್ರಾಥಮಿಕ ಸಂಪರ್ಕ ವ್ಯಕ್ತಿಗಳ ಮತ್ತು 10 ಜನ ದ್ವಿತೀಯ ಸಂಪರ್ಕ ವ್ಯಕ್ತಿಗಳನ್ನು ಗುರುತಿಸಿ ಕಾಂಟ್ಯಾಕ್ಟ್ ಟ್ರೇಸಿಂಗ್ ಆ್ಯಪ್ನಿಂದ ಕಳುಹಿಸಲಾಗುವುದು. ಹಾಗೆ ಬಂದಂತಹ ವ್ಯಕ್ತಿಗಳನ್ನು ತಕ್ಷಣದಿಂದಲೇ ವಾಚ್ ಮಾಡುವ ಮತ್ತು ಫೋಟೊ ಅಪಲೋಡ್ ಮಾಡುವ ಕೆಲಸವನ್ನು ಪ್ರಾರಂಭಿಸಬೇಕು. ಇದರಿಂದ ಹೆಚ್ಚಿನ ಮಟ್ಟದಲ್ಲಿ ರೋಗ ಹರಡುವಿಕೆಯನ್ನು ತಡೆಯಬಹುದಾಗಿರುತ್ತದೆ ಎಂದರು.
ಕ್ವಾರಂಟೈನ್ ವಾಚ್ ಆಪ್ ಮೂಲಕ ಕೆಲಸ ನಿರ್ವಹಿಸುವಲ್ಲಿ ವ್ಯಕ್ತಿಗಳ ವಿಳಾಸ ಸರಿಯಾಗಿ ದಾಖಲಿಸಬೇಕು. ಫೋಟೋ ಅಪಲೋಡ್ ಮಾಡುವಲ್ಲಿ ಸಮಸ್ಯೆಗಳು ಕಂಡು ಬರದಂತೆ ನೋಡಿ ಕೊಳ್ಳಬೇಕು. ಸ್ವ್ಯಾಬ್ (ಗಂಟಲು ದ್ರವ) ಸಂಗ್ರಹಿಸುವ ವೇಳೆಯಲ್ಲಿ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ಬಳಕೆ ಮಾಡಿಕೊಂಡು ಓಟಿಪಿ ಪಡೆದು ಸಂಗ್ರಹಿಸಬೇಕು. ಆಧಾರ ಸಂಖ್ಯೆ ಮತ್ತು ವಿಳಾಸದ ಮಾಹಿತಿಯನ್ನು ನಿಖರವಾಗಿ ಪಡೆಯಲು ಸೂಚಿಸಿದರು.