ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಇಂದು ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಪ್ರತಿಪಕ್ಷ ಕಾಂಗ್ರೆಸ್ ಅಚ್ಚರಿ ಮೂಡಿಸಿದೆ.
ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡುತ್ತಿದ್ದಂತೆ ಹಠಾತ್ ಬೆಳವಣಿಗೆಯಿಂದ ಬಿಜೆಪಿ ಶಾಸಕರಲ್ಲಿ ಗಲಿಬಿಲಿ ಉಂಟಾಯಿತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವಿಶ್ವಾಸ ನಿರ್ಣಯ ಮಂಡಿಸಿ, ಚರ್ಚೆಗೆ ಅವಕಾಶ ಕೋರಿದರು.
ನಿಯಮದ ಪ್ರಕಾರ ಒಂದು ನೊಟೀಸ್ ಕೊಟ್ಟಿದ್ದೇನೆ. ಯಡಿಯೂರಪ್ಪನವರ ಮಂತ್ರಿಮಂಡಲದ ಮೇಲೆ ವಿಶ್ವಾಸವಿಲ್ಲ. ನಮಗೆ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ಕೊಡಿ ಎಂದು ಕೋರಿದರು. ಮಧ್ಯ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನೀವು ನೀಡಿರುವ ನೋಟಿಸ್ ತಲುಪಿದೆ. ನಿಯಮಾವಳಿ ಪ್ರಕಾರ ಮಾಡುತ್ತೇನೆ. ಪ್ರತಿಪಕ್ಷದ ನಾಯಕರು ನೀಡಿರುವ ಪ್ರಸ್ತಾಪದ ಪರವಾಗಿರುವವರು ಎದ್ದು ನಿಲ್ಲಬೇಕು ಎಂದು ಹೇಳಿದರು. ಆಗ ಸಿದ್ದರಾಮಯ್ಯ ಅವರು ಪ್ರಸ್ತಾಪದ ಪರವಾಗಿ ಕನಿಷ್ಠ 23 ಸದಸ್ಯರು ಇದ್ದರೆ ಸಾಕು. ನಾವು ಅದಕ್ಕಿಂತ ಹೆಚ್ಚಿದ್ದೇವೆ ಎಂದರು.
ಆ ವೇಳೆ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಹೆಚ್ಚಾದರೆ ಅಮೃತವೂ ವಿಷವಾಗುತ್ತದೆ ಎಂದು ಛೇಡಿಸಿದರು. ಆಗ ಸ್ಪೀಕರ್ ಅವರು, ಗಂಭೀರ ವಿಷಯ ಪ್ರಸ್ತಾಪವಾಗಿದೆ ಎಂದು ಹೇಳಿ ಪ್ರಸ್ತಾವದ ಪರವಾಗಿ 23 ಜನಕ್ಕಿಂತ ಹೆಚ್ಚು ಸದಸ್ಯರು ಇದ್ದೀರಿ. ಹೀಗಾಗಿ ಸದನದ ಅನುಮತಿ ಇದೆ ಎಂದು ಪ್ರಕಟಿಸಿದರು. ಚರ್ಚೆಯ ದಿನಾಂಕ ಮತ್ತು ಸಮಯವನ್ನು ನಾಳೆ ಮತ್ತು ನಾಡಿದ್ದರೊಳಗೆ ನಿಗದಿ ಮಾಡಲಾಗುವುದು ಎಂದರು.
ಹೆಚ್ಚು ದಿನ ನಾನು ಒತ್ತಾಯ ಮಾಡುವುದಿಲ್ಲ. ಮೂರು ದಿನದೊಳಗೆ ನಿರ್ಣಯ ಪ್ರಕಟಿಸುವುದು ಸೂಕ್ತ ಎಂದು ಸಿದ್ದರಾಮಯ್ಯ ಹೇಳಿದರು. ಈ ವೇಳೆ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ರಾಜ್ಯ ಹಾಗೂ ದೇಶದಲ್ಲೂ ಬಹುಮತ ಇಲ್ಲ, ರಾಜಕೀಯ ಗಿಮಿಕ್ ಗಾಗಿ ಅವಿಶ್ವಾಸ ನಿರ್ಣಯ ಪ್ರಸ್ತಾಪ ಮಂಡಿಸಿದೆ. ಮತಕ್ಕೆ ಹಾಕಿದರೆ ಸೋಲುವುದು ಖಚಿತ. ನಿಮ್ಮ ಅನೇಕ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಪಕ್ಷ ಬಿಟ್ಟು ಬರಲು ತುದಿಗಾಲಲ್ಲಿದ್ದಾರೆ ಎಂದು ಕಾಲೆಳೆದರು.