ಹೊಸಪೇಟೆ :ತಾಲೂಕಿನಲ್ಲಿ ಕೊರೊನಾ ಸಂಖ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದನ್ನು ತಪ್ಪಿಸಲು ತಾಲೂಕು ಆಡಳಿತ ಹೊಸ ಯೋಜನೆ ರೂಪಿಸಿದೆ. ಮನೆ-ಮನೆ ಸಮೀಕ್ಷೆಯೇ ನಡೆಸಿ ಕೊರೊನಾಗೆ ಜಿಲ್ಲಾಡಳಿತ ತಡೆಯೊಡ್ಡಲು ಮುಂದಾಗಿದೆ.
ಕೊರೊನಾ ಸಂಖ್ಯೆ ಹೆಚ್ಚಳವಾಗುತ್ತಿರುವುದು ತಾಲೂಕು ಆಡಳಿತ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆ ಆರಂಭದಲ್ಲಿಯೇ ಸೋಂಕಿನ ಲಕ್ಷಣಗಳನ್ನು ಹೊಂದಿರುವವರನ್ನು ಪತ್ತೆಹಚ್ಚುವ ಕೆಲಸಕ್ಕೆ ಸ್ಥಳೀಯ ಆಡಳಿತ ಮುಂದಾಗಿದೆ.
ಐಎಲ್‍ಐ ಮತ್ತು ತೀವ್ರ ಉಸಿರಾಟ(ಸಾರಿ) ನಾನಾ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಪತ್ತೆಹಚ್ಚಿ ತಪಾಸಣೆ ನಡೆಸಿ ಚಿಕಿತ್ಸೆ ನೀಡುವ ಹಾಗೂ ಕೊರೊನಾ ಪ್ರಸರಣ ಸರಪಳಿ ತುಂಡರಿಸುವ ನಿಟ್ಟಿನಲ್ಲಿ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತಿದೆ.
ಕೋವಿಡ್ ತಂಡ ರಚನೆ :ಈಗಾಗಲೇ ತಂಡಗಳನ್ನು ರಚನೆ ಮಾಡಿ ಕಾರ್ಯ ಪ್ರವೃತ್ತವಾಗಿದ್ದು, ಪ್ರತಿ ತಂಡದಲ್ಲಿ ನೋಡಲ್ ಅಧಿಕಾರಿ, ವೈದ್ಯರು, ನರ್ಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದಾರೆ.
ಕೊರೊನಾ ಸೋಂಕಿನ ಲಕ್ಷಣಗಳಿದ್ದರೂ ತಪಾಸಣೆ ಮಾಡಿಸದೇ ನಿರ್ಲಕ್ಷ್ಯ ತೋರುತ್ತಿರುವುದು ಮತ್ತು ಸೊಂಕು ತೀವ್ರತರದಲ್ಲಿ ಉಲ್ಭಣಿಸಿದಾಗ ಆಸ್ಪತ್ರೆಗೆ ಬರುತ್ತಿರುವುದರಿಂದ ಮರಣಗಳು ಸಂಭವಿಸುತ್ತಿರುವುದು ಸೇರಿದಂತೆ ವಿವಿಧ ಸಮಸ್ಯೆಗಳು ಉಂಟಾಗುತ್ತಿವೆ.
ಈ ಹಿನ್ನೆಲೆ ಇದಕ್ಕೆ ಕಡಿವಾಣ ಹಾಕುವುದಕ್ಕೆ ಮನೆ- ಮನೆ ಸಮೀಕ್ಷೆಯೇ ಮದ್ದು ಎಂದು ನಿರ್ಧರಿಸಿರುವ ಅಧಿಕಾರಿಗಳು, ಸಮೀಕ್ಷೆ ಆರಂಭಿಸಿದ್ದಾರೆ. ಪ್ರತಿ ಮನೆಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿರೋ ಈ ತಂಡಗಳು ಮನೆಯಲ್ಲಿರುವ ಪ್ರತಿಯೊಬ್ಬರನ್ನು ತಪಾಸಣೆ ಮಾಡುತ್ತಿದೆ.