ಬೆಂಗಳೂರು: ಹಿರಿಯ ಸಾಹಿತಿ, ವಿಮರ್ಶಕ ಡಾ. ಜಿ.ಎಸ್.ಆಮೂರ ಅವರು ಇಂದು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ಮೇ 8, 1925ರಂದು ಜನಿಸಿದ್ದ ಅಮೂರ ಅವರು ನಿರಂತರವಾಗಿ ಕನ್ನಡ ವಿಮರ್ಶಾ, ಸಾಹಿತ್ಯ ಲೋಕಕ್ಕೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ನಿಂದ-ಹೆಜ್ಜೆ, ಬೇಂದ್ರೆ ಕಾವ್ಯ, ಕನ್ನಡ ಕಥನ ಸಾಹಿತ್ಯ-ಸಣ್ಣ ಕಥೆ, ಸೀಮೋಲ್ಲಂಘನ, ಕಥನಶಾಸ್ತ್ರ, ಅಮೃತವಾಹಿನಿ, ಬೇಂದ್ರೆ ಕಾವ್ಯದ ಪ್ರತಿಮಾಲೋಕ, ಕಾದಂಬರಿಯ ಸ್ವರೂಪ ಮುಂತಾದ ಹತ್ತು ಹಲವು ಪುಸ್ತಕಗಳ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ವಿಶೇಷ ಅಂದ್ರೆ ಇಂಗ್ಲಿಷ್ ಸಾಹಿತ್ಯ ಲೋಕದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಆಮೂರ ಅವರ ಸಾಹಿತ್ಯ ಸೇವೆಗೆ ಹಲವು ಪ್ರಶಸ್ತಿ, ಪುರಸ್ಕಾರಗಳು ಕೂಡ ಲಭಿಸಿದೆ. ಇತ್ತೀಚೆಗಷ್ಟೇ ನೃಪತುಂಗ ಪ್ರಶಸ್ತಿ ಘೋಷಣೆಯಾಗಿತ್ತು. ಅಲ್ಲದೆ ಮಾಸ್ತಿ ಪ್ರಶಸ್ತಿ, ಪಂಪ ಪ್ರಶಸ್ತಿ, ದ.ರಾ.ಬೇಂದ್ರೆ ಪುರಸ್ಕಾರ, ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕ್ಯಾಡೆಮಿ ಪುರಸ್ಕಾರ, ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ, ಎಸ್.ಎಸ್.ಮಾಳ್ವಾಡ್ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.