ಸುಳ್ಯ: ಮಹಾಮಾರಿ ಕೊರೊನಾ ವೈರಸ್‍ನಿಂದ ಇಡೀ ಮಾನವ ಸಂಕುಲ ಸಂಕಷ್ಟದಲ್ಲಿದ್ದರೆ, ಇತ್ತ ನಾಯಿಗಳು ಮೆದುಳು ಜ್ವರದ ವೈರಸ್‍ಗೆ ಸಾಮೂಹಿಕವಾಗಿ ಬಲಿಯಾಗುತ್ತಿವೆ.
ಹೌದು, ಮೆದುಳು ಜ್ವರದ ವೈರಸ್ ಸಾಂಕ್ರಾಮಿಕ ರೋಗವಾಗಿದ್ದು, ಒಂದು ನಾಯಿಯಿಂದ ಮತ್ತೊಂದು ನಾಯಿಗೆ ವೈರಸ್ ಮೂಲಕ ಹರಡುತ್ತಿದೆ. ಬೀದಿ ನಾಯಿಗಳಲ್ಲಿ ಹೆಚ್ಚಾಗಿ ಈ ರೋಗ ಕಾಣಿಸಿಕೊಳ್ಳುತ್ತಿದ್ದು, ಸಾಕು ನಾಯಿಗಳು ಸಹ ಈ ರೋಗಕ್ಕೆ ಬಲಿಯಾಗುವ ಭೀತಿ ಮಾಲೀಕರಿಗೆ ಉಂಟಾಗಿದೆ.
ರೋಗದ ಲಕ್ಷಣಗಳು:
1). ರೋಗ ಪೀಡಿತ ನಾಯಿ ವಿಪರೀತ ಜ್ವರದ ಪರಿಣಾಮ ತಲೆ ಎತ್ತುವುದಿಲ್ಲ. ಕವುಚಿ ಮಲಗಿ ತನ್ನ ಎರಡು ಕೈಗಳ ಮಧ್ಯದಲ್ಲಿ ತಲೆಯನ್ನಿಟ್ಟುಕೊಂಡು ನರಳಾಡುತ್ತದೆ.
2). ನಾಯಿಗಳು ದಿನದಿಂದ ದಿನಕ್ಕೆ ಆಹಾರ ಸೇವನೆಯನ್ನು ಕಡಿಮೆ ಮಾಡುತ್ತವೆ. ಮತ್ತು ಕೆಲವೊಂದು ನಾಯಿಗಳಿಗೆ ವಾಂತಿ, ಭೇದಿ ಪ್ರಾರಂಭವಾಗುತ್ತದೆ.
3). ನರದೌರ್ಬಲ್ಯ, ಕಣ್ಣಿನ ಪೊರೆ ಸಮಸ್ಯೆ ಕಾಡುವುದು.
4). ವೈರಸ್‍ಗೆ ತುತ್ತಾದ ನಾಯಿಗಳು ರೇಬಿಸ್ ರೋಗ ಪೀಡಿತ ನಾಯಿಯಂತೆ ವರ್ತಿಸುತ್ತವೆ. ಸಾಕು ನಾಯಿಗಳ ಮೇಲೆ ದಾಳಿ ಮಾಡುತ್ತವೆ.
5). ಕೆಲವೊಂದು ನಾಯಿಗಳಿಗೆ ಜ್ವರ ಹೆಚ್ಚಾಗಿ, ಮೂಗಿನಿಂದ ಕೀವು ಬರಲು ಆರಂಭವಾಗುತ್ತದೆ. ಮತ್ತು ಬಾಯಿಯಿಂದಲೂ ಕೀವು ಮಿಶ್ರಿತ ನೀರು ಬರುತ್ತದೆ. ನಾಯಿ ಸಂಚರಿಸುವಲ್ಲಿ ಇದು ಬೀಳುವುದರಿಂದ ವೈರಸ್ ಸುಲಭವಾಗಿ ಹರಡುತ್ತದೆ.
ಮನುಷ್ಯರಿಗೆ ಅಪಾಯವೇ?:
ಈ ರೋಗದಿಂದ ಮನುಷ್ಯರಿಗೆ ಯಾವುದೇ ಅಪಾಯವಿಲ್ಲ. ಬೇಸಿಗೆ ಕಾಲದಲ್ಲಿ ನಾಯಿಗಳಲ್ಲಿ ಈ ರೋಗ ಹೆಚ್ಚಾಗಿ ಉಲ್ಬಣಿಸುತ್ತದೆ. ಆ್ಯಂಟಿ ಬಯೋಟಿಕ್ ಚಿಕಿತ್ಸೆಯ ಮೂಲಕ ಈ ರೋಗ ಬರದಂತೆ ಕ್ರಮ ಕೈಗೊಳ್ಳಬಹುದು. ಜೊತೆಗೆ ವಾಂತಿ-ಭೇದಿ ಆರಂಭವಾದ ನಾಯಿಗಳು ಬೇಗ ಸಾವನ್ನಪ್ಪುತ್ತವೆ.
ನರ ದೌರ್ಬಲ್ಯಕ್ಕೆ ತುತ್ತಾದ ನಾಯಿಗಳಿಗೆ ರೋಗದ ಆರಂಭದ ದಿನಗಳಲ್ಲಿ ಸೂಕ್ತ ಚಿಕಿತ್ಸೆ ನೀಡಿದರೆ ರಕ್ಷಿಸಬಹುದು. ರೋಗ ಬಾರದಂತೆ ಆರಂಭದಲ್ಲಿ 60 ದಿನಗಳ ಮರಿಗಳಿಗೆ ಡಿಸ್ಟೆಂಪರ್ ಚಿಕಿತ್ಸೆ ನೀಡಬೇಕಾಗುತ್ತದೆ. ಬಳಿಕ 90 ದಿನಗಳ ನಂತರ ಚುಚ್ಚು ಮದ್ದು ನೀಡಿ, ನಂತರ ಪ್ರತಿ ವರ್ಷಕ್ಕೊಮ್ಮೆ ರೋಗ ನಿರೋಧಕ ಚುಚ್ಚು ಮದ್ದು ನೀಡುವುದರ ಮೂಲಕ ಈ ರೋಗದಿಂದ ನಾಯಿಗಳನ್ನು ರಕ್ಷಿಸಬಹುದು ಎಂದು ಪುತ್ತೂರು ಪಶು ವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಧರ್ಮಪಾಲ್ ತಿಳಿಸಿದ್ದಾರೆ.