ಕರ್ನಾಟಕ

karnataka

ETV Bharat / state

ಹೈಕಮಾಂಡ್ ಸಂದೇಶವನ್ನು ಸಿಎಂಗೆ ತಲುಪಿಸಿದ ಬಿ.ಎಲ್.ಸಂತೋಷ್: ಗುರುವಾರ ನಡೆಯುತ್ತಾ ಸಂಪುಟ ಸರ್ಜರಿ? - BL santhosh

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿ ಸಚಿವ ಸಂಪುಟ ವಿಸ್ತರಣೆ ಕುರಿತು ಪಕ್ಷದ ಹೈಕಮಾಂಡ್ ನೀಡಿರುವ ಸಂದೇಶವನ್ನು ತಿಳಿಸಿ ಕೆಲಕಾಲ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

Cabinet
Cabinet

By

Published : Nov 23, 2020, 7:31 PM IST

ಬೆಂಗಳೂರು:ರಾಜ್ಯ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ಹೈಕಮಾಂಡ್ ಸಂದೇಶವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ತಲುಪಿಸಿದ್ದು, ಗುರುವಾರ ಸಂಜೆ ಸಂಪುಟಕ್ಕೆ ಸರ್ಜರಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ನವದೆಹಲಿಯಿಂದ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿ ಸಚಿವ ಸಂಪುಟ ವಿಸ್ತರಣೆ ಕುರಿತು ಪಕ್ಷದ ಹೈಕಮಾಂಡ್ ನೀಡಿರುವ ಸಂದೇಶವನ್ನು ತಿಳಿಸಿ ಕೆಲಕಾಲ ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.

ದೆಹಲಿ ಭೇಟಿ ವೇಳೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿ ಮಾಡಿದ್ದ ಸಿಎಂ ಯಡಿಯೂರಪ್ಪ, ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದಿರುವವರ ಪಟ್ಟಿ ನೀಡಿದ್ದರು. ಪಟ್ಟಿಯನ್ನು ಪರಿಶೀಲನೆ ಮಾಡಿರುವ ಹೈಕಮಾಂಡ್, ಬಿ.ಎಲ್.ಸಂತೋಷ್ ಮೂಲಕ ಸಂದೇಶವನ್ನು ಸಿಎಂ ಬಿಎಸ್​ವೈಗೆ ಕಳುಹಿಸಿಕೊಟ್ಟಿದೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ ಕಳೆದ ಬಾರಿಯ ಸಂಪುಟ ವಿಸ್ತರಣೆಯಂತೆ ವಲಸಿಗರಿಗೆ ಮಾತ್ರ ಅವಕಾಶ ನೀಡಲು ಸೂಚನೆ ಬಂದಿದೆ ಎನ್ನಲಾಗಿದೆ. ಅದರಂತೆ ಎಂಟಿಬಿ ನಾಗರಾಜ್, ಆರ್.ಶಂಕರ್ ಹಾಗೂ ಮುನಿರತ್ನಗೆ ಸಚಿವ ಸ್ಥಾನ ನೀಡಲಾಗುತ್ತದೆ ಎನ್ನಲಾಗುತ್ತಿದೆ.

ಮತ್ತೊಂದು ಮೂಲ ಸಂಪುಟ ಪುನಾರಚನೆ ಸಾಧ್ಯತೆ ಇದೆ. ಮೂಲ ಬಿಜೆಪಿಗರ ಅಸಮಾಧಾನ ಶಮನ ಮಾಡಲು ಕೆಲ ಸಚಿವರನ್ನು ಕೈಬಿಟ್ಟು ಕೆಲ ಹಿರಿಯ ನಾಯಕರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಕೇವಲ ಸಂಪುಟ ವಿಸ್ತರಣೆ ಮಾಡಿದಲ್ಲಿ ಯಾರಿಗೆ ಅವಕಾಶ, ಪುನಾರಚನೆ ಮಾಡಿದಲ್ಲಿ ಯಾರನ್ನು ಬಿಡಬೇಕು, ಯಾರಿಗೆ ಅವಕಾಶ ನೀಡಬೇಕು ಎನ್ನುವ ಕುರಿತು ಸಿಎಂ ಜೊತೆ ಸಂತೋಷ್ 15 ನಿಮಿಷಗಳ ಕಾಲ ಚರ್ಚೆ ನಡೆಸಿ ಪರಸ್ಪರ ಸಮಾಲೋಚನೆ ನಡೆಸಿದರು ಎನ್ನಲಾಗಿದೆ.

ಸಂತೋಷ್ ಭೇಟಿ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಸಿಎಂ ನಿವಾಸ ಕಾವೇರಿಗೆ ಆಗಮಿಸಿ ಯಡಿಯೂರಪ್ಪ ಜೊತೆ ಸಮಾಲೋಚನೆ ನಡೆಸಿದರು. ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್​​ನಿಂದ ಬಂದಿರುವ ಸಂದೇಶದ ಕುರಿತು ಮಾತುಕತೆ ನಡೆಸಿದರು.

ಸದ್ಯ ಸಿಎಂ ಯಡಿಯೂರಪ್ಪ ನಾಳೆಯಿಂದ ಎರಡು ದಿನ ಜಿಲ್ಲಾ ಪ್ರವಾಸಕ್ಕೆ ತೆರಳುತ್ತಿದ್ದು, ಗುರುವಾರ ಮಧ್ಯಾಹ್ನ ಬೆಂಗಳೂರಿಗೆ ಹಿಂದಿರುಗಲಿದ್ದಾರೆ. ಗುರುವಾರ ಸಂಜೆಯೇ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ.

ABOUT THE AUTHOR

...view details