ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಟಿ ಸಿವಿಲ್ ಆವರಣದ ಎನ್ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ನಟಿ ರಾಗಿಣಿ ಹಾಗೂ ಸಂಜನಾಳ ಜಾಮೀನು ಅರ್ಜಿ ಭವಿಷ್ಯ ನಿರ್ಧಾರವಾಗಲಿದೆ.
ಕಳೆದ ವಾರದಿಂದ ವಿಚಾರಣೆ ನಡೆಸಿದ ನ್ಯಾಯಾಲಯ, ಇಂದು ಆದೇಶ ಹೊರಡಿಸಲಿದೆ. ಪರಪ್ಪನ ಅಗ್ರಹಾರದಲ್ಲಿ ಜೈಲು ಹಕ್ಕಿಗಳಾಗಿರುವ ನಟಿಮಣಿಯರಿಬ್ಬರು ಸದ್ಯ ಮೌನಕ್ಕೆ ಶರಣಾಗಿದ್ದಾರೆ. ಇಂದು ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಈಗಾಗಲೇ ಸಿಸಿಬಿ ಪರ ವಕೀಲರು ನಟಿಯರ ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ಮಾತ್ರವಲ್ಲದೆ ಮುಚ್ಚಿದ ಲಕೋಟೆಯಲ್ಲಿ ಸಿಡಿ, ಕೆಲ ಪ್ರಮುಖ ದಾಖಲೆಗಳನ್ನು ನೀಡಿದ್ದು, ಸಿಸಿಬಿ ಪೊಲೀಸರ ಆಕ್ಷೇಪಣೆ ಬಹಳ ಪ್ರಬಲವಾದ ಕಾರಣವಾಗಿರುವುದರಿಂದ ಜಾಮೀನು ಸಿಗುವುದು ಕಷ್ಟ ಎನ್ನಲಾಗುತ್ತಿದೆ.
ಮತ್ತೊಂದೆಡೆ ಇವರ ಜೊತೆ ಆಪ್ತರ ಜಾಮೀನು ಅರ್ಜಿಯ ಆದೇಶ ಕೂಡ ಹೊರ ಬರಲಿದೆ. ಒಂದು ವೇಳೆ ಜಾಮೀನು ಅರ್ಜಿ ವಜಾ ಆದರೆ ರಾಗಿಣಿ, ಸಂಜನಾಗೆ ಜೈಲೇ ಗತಿಯಾಗಲಿದ್ದು, ಮುಂದೆ ಹೈಕೋರ್ಟ್ ಮೊರೆ ಹೋಗುವುದು ಅನಿವಾರ್ಯವಾಗಲಿದೆ.