ದಾವಣಗೆರೆ: ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಆರೋಪ ಹೊರಿಸಿ ಮಾಯಕೊಂಡ ಗ್ರಾಮದಲ್ಲಿ ಎಎಸ್ಐ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ.
ಎಎಸ್ಐ ಓಬಳೇಶ್ ಅವರನ್ನು ಥಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯನ್ನು ಮಾಯಕೊಂಡ ಪೊಲೀಸರು ಬಂಧಿಸಿದ್ದಾರೆ. ಮಾಯಕೊಂಡ ಗ್ರಾಮದ ಬಸವಲಿಂಗಪ್ಪರ ನಿಂಗಪ್ಪ, ತಿಪ್ಪೇಸ್ವಾಮಿ, ಶೇಖರಪ್ಪ, ಹೊನ್ನಾವ್ವರ ರಂಗಪ್ಪ ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಿರುವ ಪೊಲೀಸರು ಉಳಿದವರ ಪತ್ತೆಗೆ ಬಲೆ ಬೀಸಿದ್ದಾರೆ.
ಎಎಸ್ಐ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ: ಗಣೇಶೋತ್ಸವ ಮೆರವಣಿಗೆ ವೇಳೆ ವಿನಾಃಕಾರಣ ತಮ್ಮ ಮೇಲೆ 40 ಕ್ಕೂ ಹೆಚ್ಚು ಜನರು ಹಲ್ಲೆ ನಡೆಸಿದ್ದಾರೆ ಎಂದು ಎಎಸ್ಐ ಓಬಳೇಶ್ ಅವರು ದೂರು ಕೊಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಂದು ಪೊಲೀಸರು ಮಾಡಿರುವ ವಿಡಿಯೋ ಚಿತ್ರೀಕರಣ ಆಧರಿಸಿ ಹಲ್ಲೆ ನಡೆಸಿದ 15 ಮಂದಿಯನ್ನು ಗುರುತಿಸಲಾಗಿದ್ದು, ಈ ಪೈಕಿ 9 ಮಂದಿ ಸೆರೆಸಿಕ್ಕಿದ್ದಾರೆ. ಕೊಲೆ ಯತ್ನ, ಜಾತಿ ನಿಂದನೆ ಸೆಕ್ಷನ್ ನಡಿ ದೂರು ದಾಖಲಿಸಲಾಗಿದೆ.
ಘಟನೆ ಬಗ್ಗೆ ಎಸ್ಪಿ ಹೇಳೋದೇನು?
ಮಾಯಕೊಂಡ ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ನಡೆಯುತಿತ್ತು. ಮಾರ್ಗ ಮಧ್ಯೆ ವಿದ್ಯುತ್ ಕಡಿತಗೊಂಡ ಕಾರಣ ಮೆರವಣಿಗೆ ಸ್ಥಗಿತಗೊಂಡಿತ್ತು. ಈ ವೇಳೆ ಮಾಯಕೊಂಡ ಎಎಸ್ಐ ಓಬಳೇಶ್ ನೀರು ಕುಡಿಯಲು ಮನೆಯೊಂದಕ್ಕೆ ಹೋಗಿದ್ದಾರೆ. ಮನೆಯಲ್ಲಿದ್ದ ಮಹಿಳೆಯ ಪತಿ ಸಂಬಂಧಿಕರು, ಗ್ರಾಮಸ್ಥರು ತಪ್ಪಾಗಿ ಅರ್ಥೈಸಿಕೊಂಡು ಎಎಸ್ಐ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.