ಕರ್ನಾಟಕ

karnataka

ETV Bharat / state

ಆಶ್ರಯ ಮನೆಗಳ ನಿರ್ಮಾಣಕ್ಕೆ ಜಮೀನು ಗುರುತಿಸಿ: ಜಿಲ್ಲಾಧಿಕಾರಿ ಸೂಚನೆ

ಶಿವಮೊಗ್ಗ ಜಿಲ್ಲೆಯ ಪ್ರತಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕಾಗಿ ಕನಿಷ್ಠ 20 ರಿಂದ 25 ಎಕರೆ ಜಮೀನು ಗುರುತಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

By

Published : Nov 12, 2019, 6:19 PM IST

ಶಿವಮೊಗ್ಗ: ಪ್ರತಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕಾಗಿ ಕನಿಷ್ಠ 20 ರಿಂದ 25 ಎಕ್ರೆ ಜಮೀನು ಗುರುತಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ನಡುವಣ ಸಮನ್ವಯ ಕುರಿತು ನಡೆಸಿದ ಸಭೆಯಲ್ಲಿ ಮಾತನಾಡಿದರು.

ನಗರಪ್ರದೇಶದಲ್ಲಿ ಇರುವ ವಸತಿ ರಹಿತರಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಜಮೀನು ಆದ್ಯತೆ ಮೇರೆಗೆ ಗುರುತಿಸಬೇಕು. ತಹಶೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿ ತಂಡ ರಚಿಸಿ ಈ ಕಾರ್ಯವನ್ನು ಕೈಗೊಳ್ಳಬೇಕು ಎಂದರು.

ಕೆಎಫ್‍ಡಿ ಪ್ರಯೋಗಾಲಯ: ಮಂಗನ ಕಾಯಿಲೆ ಪತ್ತೆ ಪ್ರಯೋಗಾಲಯವನ್ನು ಆರಂಭಿಸಲು 15 ಕೋಟಿ ರೂ. ಮಂಜೂರಾಗಿದೆ. ಇದಕ್ಕಾಗಿ ಸಾಗರದಲ್ಲಿ 6 ಎಕರೆ ಸ್ಥಳ ಗುರುತಿಸಲಾಗಿದ್ದು, ಟೆಂಡರ್ ಕರೆಯುವುದು ಮುಂತಾದ ಪ್ರಕ್ರಿಯೆ ಆರಂಭಿಸುವಂತೆ ಅವರು ತಿಳಿಸಿದರು. ಮಂಗನ ಕಾಯಿಲೆ ಕಾಣಿಸಿಕೊಂಡ ಬಳಿಕ ಕ್ರಮ ಕೈಗೊಳ್ಳುವ ಬದಲು ನಿರಂತರವಾಗಿ ಜನರಲ್ಲಿ ಅರಿವು ಮೂಡಿಸುವ ಕಾರ್ಯ, ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಭೆ, ಗ್ರಾಮಗಳಿಗೆ ಭೇಟಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪ್ರಸ್ತುತ 40ಸಾವಿರ ಬಾಟಲ್ ತೈಲ ಲಭ್ಯವಿದ್ದು, ಮಂಗನ ಕಾಯಿಲೆ ಪೀಡಿತ ಗ್ರಾಮಗಳಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಕಾರ್ಯ ಮಾಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಸೂಚನೆ:ಬೆಳೆ ಹಾನಿ ಪ್ರಕರಣಗಳಲ್ಲಿ ಜಿಲ್ಲೆಯ 12 ಸಾವಿರ ರೈತರಿಗೆ ಬೆಳೆ ಪರಿಹಾರ ಅವರ ಖಾತೆಗಳಿಗೆ ಜಮಾ ಆಗಿದ್ದು, ಪರಿಶೀಲನೆ ನಡೆಸಬೇಕು. ತೋಟಗಾರಿಕಾ ಬೆಳೆ ವಿಮೆ ವಿಳಂಬವಾಗುತ್ತಿದ್ದು, ಹಳೆಯ ಮೂರು ಕೋಟಿ ರೂ. ರೈತರ ಖಾತೆಗಳಿಗೆ ಜಮಾ ಆಗಬೇಕಿದೆ. ಈ ಕುರಿತು ಮುಂದಿನ ವಾರ ವಿಮಾ ಕಂಪನಿ ಅಧಿಕಾರಿಗಳ ಸಭೆ ಕರೆಯಬೇಕು. ಹಾಸ್ಟೆಲ್‍ಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಬೇಕಾಗಿರುವ ಜಮೀನು ಬಗ್ಗೆ ಪ್ರಸ್ತಾವನೆ ಸಲ್ಲಿಸಬೇಕು. ಈಗಾಗಲೇ ಇಲಾಖೆಗೆ ಹಸ್ತಾಂತರ ಮಾಡಲಾಗಿರುವ ಆರ್​ಎಸ್​ಎಂ ಕಟ್ಟಡಗಳ ಸುರಕ್ಷತೆ ಬಗ್ಗೆ ಮತ್ತೆ ಪರಿಶೀಲನೆ ನಡೆಸಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಒಟ್ಟು 453 ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿದ್ದು, ಕಳೆದ ಎರಡು ತಿಂಗಳಲ್ಲಿ ಕೇವಲ 24 ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇದನ್ನು ತ್ವರಿತಗೊಳಿಸಬೇಕು ಎಂದು ಸೂಚನೆ ನೀಡಿದರು.

ಸಬ್ ಸ್ಟೇಷನ್ ಮಂಜೂರು:ಶಿಕಾರಿಪುರದಲ್ಲಿ 4, ಶಿವಮೊಗ್ಗ ಹಾಗೂ ಸಾಗರದಲ್ಲಿ ತಲಾ ಒಂದು ವಿದ್ಯುತ್ ಸಬ್ ಸ್ಟೇಷನ್ ಮಂಜೂರಾಗಿದ್ದು, ಇದಕ್ಕೆ ಜಮೀನು ಒದಗಿಸಬೇಕು. ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯಿಂದ ಮೆಸ್ಕಾಂಗೆ 16 ಕೋಟಿ ರೂ. ಶುಲ್ಕ ಬಾಕಿ ಬರಬೇಕಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದರು.

ಸಮನ್ವಯ ಅಗತ್ಯ: ಇತರ ಇಲಾಖೆಗಳೊಂದಿಗೆ ಸೇರಿಕೊಂಡು ಕ್ರಮ ಕೈಗೊಳ್ಳಬೇಕಾದ ಸಂದರ್ಭದಲ್ಲಿ ಸಮನ್ವಯ ಅಗತ್ಯ. ಅಗತ್ಯ ಸಂದರ್ಭಗಳಲ್ಲಿ ಜಿಲ್ಲಾಡಳಿತದ ನೆರವು ಪಡೆಯಬೇಕು. ಸರ್ಕಾರದ ಮಟ್ಟದಲ್ಲಿ ಆಗಬೇಕಾಗಿರುವ ಕೆಲಸಗಳನ್ನು ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಿಇಒ ವೈಶಾಲಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details