ಶಿವಮೊಗ್ಗ: ಆಗುಂಬೆಯ ಏಳನೇ ತಿರುವಿನಲ್ಲಿನ ಕಂದಕಕ್ಕೆ ಉರುಳಿಬಿದ್ದ ವ್ಯಕ್ತಿಯೊಬ್ಬರನ್ನು ಕೆಲ ಯುವಕರು ಜೀವದ ಹಂಗು ತೊರೆದು ರಕ್ಷಿಸಿದ್ದಾರೆ. ಭಾನುವಾರ ಮಧ್ಯಾಹ್ನ ಸೋಮೇಶ್ವರದ ಕಡೆಯಿಂದ ಗುಜರಿ ವ್ಯಾಪಾರಿ ಮೊಹಮ್ಮದ್ ಪಾಷಾ ಅವರು ಟೋಯಿಂಗ್ ವಾಹನದಲ್ಲಿ ಟ್ರ್ಯಾಕ್ಟರ್ ಟೋಯಿಂಗ್ ಮಾಡಿಕೊಂಡು ಬರುತ್ತಿದ್ದರು. 7ನೇ ತಿರುವಿನಲ್ಲಿ ಟೋಯಿಂಗ್ ವಾಹನ ಘಾಟಿ ಹತ್ತಲಾಗದೆ ನಿಂತಿತ್ತು. ವಾಹನದಿಂದ ಕೆಳಗಿಳಿದ ಮೊಹಮ್ಮದ್ ಪಾಷಾ ಚಾಲಕನಿಗೆ ನಿರ್ದೇಶನ ನೀಡುತ್ತಿದ್ದರು. ಈ ವೇಳೆ ವಾಹನ ದಿಢೀರ್ ಹಿಂದಕ್ಕೆ ಬಂದಿದ್ದು ಮೊಹಮ್ಮದ್ ಪಾಷಾ ತಪ್ಪಿಸಿಕೊಳ್ಳುವ ಭರದಲ್ಲಿ ಘಾಟಿಯಿಂದ ಕೆಳಗೆ ಬಿದ್ದಿದ್ದರು ಎಂದು ತಿಳಿದು ಬಂದಿದೆ.
ಅದೇ ಮಾರ್ಗವಾಗಿ ಆಗುಂಬೆಗೆ ತೆರಳುತ್ತಿದ್ದ ಕೆಲ ಯುವಕರು ಮೊಹಮ್ಮದ್ ಪಾಷಾ ಅವರ ರಕ್ಷಣೆಗೆ ಧಾವಿಸಿದ್ದಾರೆ. ಪ್ರವಾಸಿಗರ ವಾಹನಗಳಲ್ಲಿದ್ದ ಬೆಡ್‌ಶೀಟ್, ಹಗ್ಗವಾಗಿ ಬಳಸಿ ಕಂದಕ್ಕೆ ಇಳಿದು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಮೊಹಮ್ಮದ್ ಪಾಷಾ ಅವರನ್ನು ರಕ್ಷಿಸಿ ಮೇಲೆತ್ತಿದ್ದಾರೆ. ನಂತರ ಅವರನ್ನು ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದ್ದಾರೆ.