ಶಿವಮೊಗ್ಗ: ವೈಯಕ್ತಿಕ ದ್ವೇಷದ ಹಿನ್ನೆಲೆ ವ್ಯಕ್ತಿಯೊಬ್ಬನನ್ನು ಯುವಕರ ಗುಂಪೊಂದು ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಇಲ್ಲಿನ ಇಲಿಯಾಜ್ ನಗರದ 100 ಅಡಿ ರಸ್ತೆಯಲ್ಲಿ ಕೊಲೆ ನಡೆದಿದ್ದು, ಆಸೀಫ್(25) ಮೃತ ವ್ಯಕ್ತಿ. ಈತನನ್ನು ಜಬಿವುಲ್ಲಾ (25) ಹಾಗೂ ಇತರ ಮೂವರು ಯುವಕರು ಸೇರಿ ಕೊಲೆ ಮಾಡಿದ್ದಾರೆ.
ಮೃತ ಆಸಿಫ್, ಇಲಿಯಾಜ್ ನಗರದ 100 ಅಡಿ ರಸ್ತೆಯಲ್ಲಿ ಬೈಕ್ನಲ್ಲಿ ಬಂದು ನಿಂತಿದ್ದ. ಈ ವೇಳೆ ಹಿಂಬದಿಯಿಂದ ಬಂದ ನಾಲ್ವರು ಯುವಕರ ಗುಂಪು, ಮಾರಾಕಾಸ್ತ್ರಗಳಿಂದ ದಾಳಿ ಮಾಡಿದೆ. ದಾಳಿ ವೇಳೆ ಆಸೀಫ್ ತಲೆಗೆ ಬಲವಾದ ಹೊಡೆತ ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೊಲೆ ಕಂಡು ಸ್ಥಳೀಯರು ಗಾಬರಿಯಿಂದ ಓಡಾಡಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತ ಆಸೀಫ್ ಹಾಗೂ ಜಬೀವುಲ್ಲಾ ಇಬ್ಬರು ಆಟೋ ಚಾಲಕರೆಂದು ತಿಳಿದು ಬಂದಿದೆ.
ಬುಧವಾರ ರಾತ್ರಿ ನಡೆದ ಯುವಕನ ಭೀಕರ ಕೊಲೆಯ ಪ್ರಮುಖ ಆರೋಪಿ ಜಬೀವುಲ್ಲಾನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ಇಂದು ಡಿಎಆರ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ರಾತ್ರಿ ಇಲಿಯಾಜ್ ನಗರದ 100 ಅಡಿ ರಸ್ತೆಯಲ್ಲಿ ಬೈಕ್ನಲ್ಲಿ ಬರುತ್ತಿದ್ದ ಆಸೀಫ್ ಎಂಬಾತನನ್ನು ಹಿಂಬದಿಯಿಂದ ಬಂದ ಜಬೀವುಲ್ಲಾ ಹಾಗೂ ಇತರೆ ಮೂವರು ಸೇರಿ ಮಾರಾಕಾಸ್ತ್ರಗಳಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದರು. ಪ್ರಮುಖ ಆರೋಪಿ ಜಬೀವುಲ್ಲಾನನ್ನು ಬಂಧಿಸಲಾಗಿದೆ. ಕೊಲೆಗೆ ಹಳೆಯ ದ್ವೇಷ ಎಂಬುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆಸೀಫ್ ಹಾಗೂ ಜಬೀವುಲ್ಲಾ ಈ ಇಬ್ಬರ ನಡುವೆ ಕಳೆದ ಕೆಲ ತಿಂಗಳಿನಿಂದ ದ್ವೇಷ ನಡೆಯುತ್ತಿತ್ತು. ಈ ಕುರಿತು ಸಮುದಾಯದ ಮುಖಂಡರುಗಳು ಮಾತುಕತೆ ನಡೆಸಿದ್ದರು. ಆದರೂ ಸಹ ಬಗೆಹರಿದಿರಲಿಲ್ಲ. ಸದ್ಯಕ್ಕೆ ಓರ್ವನನ್ನು ಮಾತ್ರ ಬಂಧಿಸಲಾಗಿದೆ. ಇತರೆ ಮೂವರನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದರು.