ಶಿವಮೊಗ್ಗ:ಭದ್ರಾವತಿ ತಾಲೂಕಿನ ಅರಕರೆ ಗ್ರಾಮದಲ್ಲಿಗಣಪತಿ ನಿಮಜ್ಜನದ ವೇಳೆ ಯುವಕನೋರ್ವ ಕೈಯಲ್ಲಿ ಲಾಂಗ್ ಹಿಡಿದು ಡ್ಯಾನ್ಸ್ ಮಾಡಿರುವ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಹೊಳೆಹೊನ್ನೂರು ಪೊಲೀಸರು ಆತನಿಂದ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಬಿಟ್ಟಿರುವ ಘಟನೆ ನಡೆದಿದೆ.
ಇಂದಿನ ಯುವ ಸಮೂಹ ಸಾಮಾಜಿಕ ಜಾಲತಾಣದಲ್ಲೇ ಹೆಚ್ಚಿನ ಸಮಯ ಕಳೆಯುತ್ತಾರೆ. ತಾವು ಮಾಡುವ ಎಲ್ಲಾ ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಅದರಂತೆ ಯುವಕನೋರ್ವ ರೀಲ್ಸ್ ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಗಣಪತಿ ನಿಮಜ್ಜನ ಮೆರವಣಿಗೆಯಲ್ಲಿ ಭದ್ರಾವತಿ ತಾಲೂಕಿನ ಯುವಕನೋರ್ವ ರೀಲ್ಸ್ ಮಾಡುವಾಗ ಕೈಯಲ್ಲಿ ಲಾಂಗ್ ಹಿಡಿದು ಡ್ಯಾನ್ಸ್ ಮಾಡಿದ್ದಾನೆ. ಈ ವಿಡಿಯೋ ಸಾಕಷ್ಟು ಕಡೆ ವೈರಲ್ ಆಗಿತ್ತು.
ಇದಕ್ಕೆ ಡಾಲಿ ಧನಂಜಯ್ ಅವರ ನಟನೆಯ ಚಿತ್ರದ 'ರೌಡಿಗಳು ನಾವು ರೌಡಿಗಳು' ಎನ್ನುವ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಭದ್ರಾವತಿ ತಾಲೂಕಿನ ಅರಕರೆ ಗ್ರಾಮದ ಪದವಿ ಮುಗಿಸಿದ ಯುವಕ ಈ ರೀತಿ ಲಾಂಗ್ ಹಿಡಿದು ಡ್ಯಾನ್ಸ್ ಮಾಡಿದ್ದಾನೆ. ನಂತರ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ. ಇದನ್ನು ನೋಡಿದ ಹೊಳೆಹೊನ್ನೂರು ಪೊಲೀಸರು ಯುವಕನನ್ನು ಪೊಲೀಸ್ ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ.
ತಮ್ಮ ಮಗನನ್ನು ಪೊಲೀಸರು ಕರೆ ತಂದಿರುವ ವಿಚಾರ ತಿಳಿದ ಪೋಷಕರು ಠಾಣೆಗೆ ದೌಡಾಯಿಸಿದ್ದಾರೆ. ಈ ವೇಳೆ ಯುವಕನ ಪೂರ್ವಾಪರ ವಿಚಾರಣೆ ನಡೆಸಿದ ಪೊಲೀಸರು, ಆತನಿಗೆ ಯಾವುದೇ ರೌಡಿಗಳ ಬೆಂಬಲ ಹಾಗೂ ಸ್ನೇಹ ಇಲ್ಲದೆ ಇರುವುದನ್ನು ಗಮನಿಸಿ, ಯುವಕನ ಮೊದಲ ಕೃತ್ಯ ಎಂದು ಸಣ್ಣ ಕೇಸ್ ಹಾಕಿ ಪೋಷಕರಿಗೆ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕೆಂದು ಮುಚ್ಚಳಿಕೆ ಬರೆಯಿಸಿಕೊಂಡು ಕಳುಹಿಸಿದ್ದಾರೆ.
ಇದನ್ನೂ ಓದಿ:VIDEO: ಬೈಕ್ ಮೇಲೆ ನಿಂತು ರೀಲ್ಸ್ ಮಾಡುವಾಗ ಬಿದ್ದು ಯುವಕನಿಗೆ ಗಂಭೀರ ಗಾಯ