ಶಿವಮೊಗ್ಗ:ಇನ್ನೂ ಹದಿನೈದು ದಿನದಲ್ಲಿ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸುವ ಹೊಣೆ ನನ್ನದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಶಿವಮೊಗ್ಗ ನಗರದ ಈಡಿಗರ ಭವನದಲ್ಲಿ ಆಯೋಜಿಸಿದ್ದ ಶರಾವತಿ ಮುಳುಗಡೆ ಸಂತ್ರಸ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಇನ್ನೂ ಹದಿನೈದು ದಿನದಲ್ಲಿ ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ. ಯಾವನೋ ಪಾದಯಾತ್ರೆ ಮಾಡುತ್ತಿದ್ದಾನೆ, ಅವರಿಗೆ ಪ್ರಶ್ನೆ ಕೇಳುತ್ತೇನೆ ನೀವು ಅಧಿಕಾರದಲ್ಲಿದ್ದಾಗ ಯಾಕೇ ಈ ಸಮಸ್ಯೆ ಬಗೆಹರಿಸಲಿಲ್ಲ ಎಂದು. ಪಾದಯಾತ್ರೆಯನ್ನ ರಾಜಕೀಯ ಡೊಂಬರಾಟ ಮಾಡಬೇಡಿ. ಶರಾವತಿ ಸಂತ್ರಸ್ತರ ನೇರವಿಗೆ ಬರುತ್ತೇವೆ, ನಾವು ರೈತರಿಗೆ ಅನ್ಯಾಯ ಆಗಲು ಬಿಡೋದಿಲ್ಲ ಎಂದು ಹೇಳುತ್ತೀರಾ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರದ ಮೂಲಕ ಪ್ರಸ್ತಾವನೆ ಸಲ್ಲಿಸಿ ಸಮಸ್ಯೆ ಬಗೇಹರಿಸುತ್ತವೆ ಎಂಬ ಕಾಂಗ್ರೆಸ್ ಅವರ ಸಿದ್ದಾಂತ ಸಮಸ್ಯೆಯನ್ನು ಸಮಸ್ಯೆಯಾಗಿಯೇ ಉಳಿಬೇಕು ಎನ್ನುವ ಸಿದ್ದಾಂತ. ಆದರೆ, ನಮ್ಮ ಸಿದ್ದಾಂತ ರೈತರ ಸಮಸ್ಯೆಯನ್ನು ಬಗೆಹರಿಸುವ ಸಿದ್ಧಾಂತ ಹಾಗಾಗಿ ಯಾರ ಮಾತು ಕೇಳಬೇಡಿ ಎಂದರು. ಅಗತ್ಯ ಬಿದ್ದರೆ ದೆಹಲಿಗೆ ಹೋಗಿ ಮತ್ತೊಮ್ಮೆ ಮಾತಾಡುತ್ತೇನೆ ಈ ಸಮಸ್ಯೆ ಬಗೆಹರಿಸುವುದು ನನ್ನ ಜವಾಬ್ದಾರಿ ನಾನು ಬಗೇಹರಿಸುತ್ತೇನೆ ಎಂದು ಇದೇ ವೇಳೆ ಮಾಜಿ ಸಿಎಂ ಭರವಸೆ ನೀಡಿದರು.
ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ:ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಶೀಘ್ರದಲ್ಲೇ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸುತ್ತೇವೆ. ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಅರವತ್ತು ವರ್ಷದ ಸಮಸ್ಯೆಯನ್ನು ನಮ್ಮ ಕಾಲದಲ್ಲೇ ಮುಗಿಬೇಕು ಅಂತ ಇತ್ತು ಅನಿಸುತ್ತೇ ಹಾಗಾಗಿ ಶೀಘ್ರದಲ್ಲೇ ಸಮಸ್ಯೆಯನ್ನು ನಾವು ಬಗೆಹರಿಸುತ್ತೇವೆ ಎಂದರು.
ಚುನಾವಣೆ ಹತ್ತಿರ ಬಂದಾಗ ಮಾತ್ರ ಕಾಂಗ್ರೆಸ್ ನವರಿಗೆ ಸಮಸ್ಯೆ ಕಾಣುತ್ತೆ. ಈ ರೀತಿಯಾಗಿ ಕಾಂಗ್ರೆಸ್ ಕಳೆದ ಅರವತ್ತು ವರ್ಷಗಳಿಂದ ಜನರ ಜೀವನದ ಜೊತೆ ಆಟ ಆಡುತ್ತಾ ಬರುತ್ತಿದ್ದಾರೆ. ಯಾವ ಪುರುಷಾರ್ಥ ಕ್ಕೆ ಪಾದಯಾತ್ರೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ ಅವರು ವೈದ್ಯರು ಏನಾದರೂ ಹೇಳಿದ್ದಾರಾ? ವಾಕಿಂಗ್ ಮಾಡಿ ಎಂದು ಹಾಗಾಗಿ ಪಾದಯಾತ್ರೆ ಮಾಡುತ್ತೀರಬೇಕು ಎಂದು ವ್ಯಂಗ್ಯವಾಡಿದರು.