ಶಿವಮೊಗ್ಗ: ವಿಶ್ವ ಪರಿಸರ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು ಎಂದು ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಹೇಳಿದ್ದಾರೆ. ಇವರು ನಗರದ ಸೇಂಟ್ ಜೋಸೆಫ್ ಅಕ್ಷರಧಾಮ ವಿದ್ಯಾಸಂಸ್ಥೆ ಹಾಗೂ ನಗರದ ಸರ್ಜಿ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳೆಲ್ಲ ಸೇರಿ ಒಂದೂವರೆ ಸಾವಿರ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಅರ್ಥ ಪೂರ್ಣವಾಗಿ ಆಚರಿಸಿದರು.
ವಿಶ್ವ ಪರಿಸರದ ದಿನಾಚರಣೆ ನಿಮಿತ್ತ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪರಿಸರದ ಪ್ರಬಂಧ ಬರೆಯುವ ಹಾಗೂ ಚಿತ್ರ ಬರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಪ್ರಾಥಮಿಕ, ಹೈಸ್ಕೂಲ್, ಪದವಿಪೂರ್ವ ಕಾಲೇಜು ವಿವಿಧ ಹಂತಗಳಲ್ಲಿ ಸ್ಪರ್ಧೆ ನಡೆಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗಿಯಾಗಿ ವಿಜೇತರಾದವರಿಗೆ 70 ಸಾವಿರದಷ್ಟು ಬಹುಮಾನ ಸಾಲುಮರದ ತಿಮ್ಮಕ್ಕನವರು ವಿತರಿಸಿದರು.
ಕಾರ್ಯಕ್ರಮದಲ್ಲಿ ವೈದ್ಯ ಡಾ.ಧನಂಜಯ್ ಸರ್ಜಿ ಅವರು ಮಾತನಾಡಿ, ಒಬ್ಬ ಮನುಷ್ಯ ಒಂದು ದಿನಕ್ಕೆ 11,500 ಲೀಟರ್ ಗಾಳಿ ತೆಗೆದುಕೊಂಡು, ಅಷ್ಟೆ ಪ್ರಮಾಣದಲ್ಲಿ ಗಾಳಿ ಹೊರಗೆ ಬಿಡುತ್ತಾನೆ. ಮಾನವನಿಗೆ ಶ್ವಾಸಕೋಶ ಹೇಗೆ ಕೆಲಸ ಮಾಡುತ್ತದೆಯೋ ಅಂತೆಯೇ ಪ್ರಕೃತಿಯ ಶ್ವಾಸಕೋಶ ವಾಗಿ ಮರಗಿಡಗಳು ಕಾರ್ಯನಿರ್ವಹಿಸುತ್ತದೆ.