ಶಿವಮೊಗ್ಗ: ರೈಲ್ವೆ ಮೇಲ್ಸೇತುವೆ ಕೆಳಭಾಗದ ಅಂಡರ್ ಗ್ರೌಂಡ್ ಪೈಪ್ಲೈನ್ ಅಳವಡಿಕೆಗಾಗಿ ಮಣ್ಣು ತೆಗೆಯುವಾಗ ಮಣ್ಣು ಕುಸಿದು ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಮಣ್ಣು ಕುಸಿದು ಮೃತಪಟ್ಟ ಕಾರ್ಮಿಕನನ್ನು ಶಿವಮೊಗ್ಗ ತಾಲೂಕು ಮಂಡೆನಕೊಪ್ಪದ ಸತೀಶ್ ನಾಯ್ಕ ಎಂದು ಗುರುತಿಸಲಾಗಿದೆ.
ಶಿವಮೊಗ್ಗದ ನವಲೆ ರಸ್ತೆಯ ಭಾಗದಲ್ಲಿ ನಡೆಯುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯಲ್ಲಿ ಮೇಲ್ಸೇತುವೆ ಕೆಳಭಾಗದಲ್ಲಿ ಅಂಡರ್ ಗ್ರೌಂಡ್ ಪೈಪ್ ಅಳವಡಿಕೆ ಕಾರ್ಯ ನಡೆಸಲಾಗುತ್ತಿದೆ. ಜೆಸಿಬಿ ಮೂಲಕ ಮಣ್ಣು ತೆಗೆದು ಪೈಪ್ ಅಳವಡಿಸಲಾಗುತ್ತಿತ್ತು. ಪೈಪ್ ಅಳವಡಿಕೆ ಮಾಡಲು ಮಣ್ಣು ತೆಗೆದು ಎರಡು ಅಡಿ ಗಾತ್ರದ ಕಾಂಕ್ರಿಟ್ ಪೈಪ್ಗಳನ್ನು ಅಳವಡಿಸಲು ಹೋದಾಗ ಮಣ್ಣು ಕುಸಿದಿದೆ. ಈ ವೇಳೆ, ಸತೀಶ್ ನಾಯ್ಕ ಮಣ್ಣಿನಡಿ ಸಿಲುಕಿದಾಗ ಆತನನ್ನು ಮೇಲಕ್ಕೆ ಎತ್ತಲು ಜೆಸಿಬಿ ಯತ್ನಿಸುವಾಗ ಜೆಸಿಬಿಯ ಬಕೆಟ್ ಸತೀಶ್ ನಾಯ್ಕನ ತಲೆಗೆ ತಾಗಿದೆ. ಉಸಿರಾಟ ತೊಂದರೆ ಮತ್ತು ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದಾರೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಮಂಡ್ಯದಲ್ಲಿ ವಿದ್ಯುತ್ ತಂತಿ ತುಳಿದು ಯುವ ರೈತ ಸಾವು: ಚೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ