ಶಿವಮೊಗ್ಗ:ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಮಲೆನಾಡಿನ ಮೂವರಿಗೆ ಮಹಿಳೆಯೊಬ್ಬರು ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಕುರಿತು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸನಗರ ತಾಲೂಕು ಗವಟೂರು ನಿವಾಸಿ ಶ್ವೇತ ಎಂಬವರ ವಿರುದ್ಧ ಕೇಸು ದಾಖಲಾಗಿದೆ.
ವಂಚನೆಗೊಳಗಾದ ಅರ್ಜುನ್, ನವೀನ್ ಹಾಗೂ ಆದರ್ಶ ಎಂಬವರು, ಶ್ವೇತ ನಮ್ಮಿಂದ ಹಣ ಪಡೆದು ಕೆಲಸ ಕೊಡಿಸಿಲ್ಲ ಎಂದು ದೂರು ದಾಖಲಿಸಿದ್ದಾರೆ. ಶ್ವೇತಾ ಹೊಸನಗರ ತಾಲೂಕು ರಿಪ್ಪನ್‌ಪೇಟೆಯಲ್ಲಿ ಬ್ಯೂಟಿ ಪಾರ್ಲರ್ ಹಾಗೂ ಸಣ್ಣ ಪ್ರಮಾಣದ ಗಾರ್ಮೆಂಟ್ಸ್ ನಡೆಸುತ್ತಿದ್ದಾರೆ. ಇವರು ನಿರುದ್ಯೋಗಿ ಅಮಾಯಕ ಯುವಕರನ್ನು ಪರಿಚಯಿಸಿಕೊಂಡು, ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಲಕ್ಷಾಂತರ ರೂ. ಹಣ ಪಡೆದು ಮೋಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣದ ಕುರಿತು ಮೂವರು ಈಟಿವಿ ಭಾರತ್ಗೆ ತಾವು ಮೋಸ ಹೋಗಿರುವ ಕುರಿತು ಮಾಹಿತಿ ನೀಡಿದರು. "ಶ್ವೇತ ಅವರು ಪ್ರಶಾಂತ್ ದೇಶಪಾಂಡೆ ಎನ್ನುವವರ ಜೊತೆ ಸೇರಿ ಮೋಸ ಮಾಡುತ್ತಿದ್ದಾರೆ. ಹಣ ನೀಡಿದವರು ಸಾಕಷ್ಟು ಒತ್ತಡ ಹಾಕಿದರೆ ಅವರನ್ನು ಬೆಂಗಳೂರಿಗೆ ಕರೆಯಿಸಿ, ರೈಲ್ವೆ ನಿಲ್ದಾಣದ ಕಚೇರಿಗೆ ಕರೆದುಕೊಂಡು ಹೋಗಿ ಸ್ವಲ್ಪ ಹೊತ್ತು ಕಾಯಿಸಿ ಅಧಿಕಾರಿಗಳು ಇಂದು ಬರಲ್ಲ, ನಾಳೆ ಬರ್ತಾರೆ ಎಂದು ಹೇಳುತ್ತಾರೆ. ಸುಮ್ಮನೆ ಕೆಲವು ದಾಖಲೆಗಳ ಮೇಲೆ ಸಹಿ ಮಾಡಿಸಿಕೊಂಡು ಕಳುಹಿಸುತ್ತಾರೆ. ನಕಲಿ ನೇಮಕಾತಿ ಪತ್ರ ನೀಡಿ ಮೋಸ ಮಾಡುವುದನ್ನೇ ತಮ್ಮ ಕಸುಬಾಗಿಸಿಕೊಂಡಿದ್ದಾರೆ" ಎಂದಿದ್ದಾರೆ.