ಶಿವಮೊಗ್ಗ: ತೀರ್ಥಹಳ್ಳಿ ಪಟ್ಟಣದ ಜನರ ನೆಮ್ಮದಿಗೆಡಿಸಿದ್ದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಳೆದ 4 ತಿಂಗಳ ಹಿಂದೆ ತೀರ್ಥಹಳ್ಳಿ ಪಟ್ಟಣ ಸೇರಿದಂತೆ ಮೇಲಿನ ಕುರುವಳ್ಳಿ ಭಾಗದ ಮನೆ, ತೋಟಕ್ಕೆ ನುಗ್ಗಿದ ಕಾಡಾನೆ ಹಾವಳಿ ನಡೆಸಿತ್ತು. ಹೀಗಾಗಿ, ಒಂಟಿ ಸಲಗವನ್ನು ಸೆರೆ ಹಿಡಿಯಬೇಕೆಂದು ಸ್ಥಳೀಯರು ಬೇಡಿಕೆ ಇಟ್ಟಿದ್ದರು. ಕೊನೆಗೂ ನಿನ್ನೆ ರಾತ್ರಿ ದೇವಂಗಿ ಬಳಿಯ ಮಳಲೂರಿನ ಅರಣ್ಯದಲ್ಲಿ ಸೆರೆ ಹಿಡಿಯಲಾಗಿದೆ.
ಕಾಡಾನೆ ಸೆರೆ ಹಿಡಿಯುವಂತೆ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅರಣ್ಯ ಇಲಾಖೆಗೆ ತಿಳಿಸಿದ್ದರು. ಬಳಿಕ, ರಾಜ್ಯ ಅರಣ್ಯ ಇಲಾಖೆಯು ತಂಡ ರಚನೆ ಮಾಡಿತ್ತು. ಈ ತಂಡದಲ್ಲಿ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದ ವೈದ್ಯರಾದ ವಿನಯ್, ಚಾಮರಾಜನಗರದ ವೈದ್ಯರಾದ ವಾಸೀಮ್, ಬಂಡಿಪುರ ವೈದ್ಯರಾದ ಮುಜೀಬ್, ಹುಲಿ ಮತ್ತು ಸಿಂಹ ಧಾಮದ ವೈದ್ಯ ಮುರುಳಿ ಮೋಹನ್ ಅವರು ಡಿಎಫ್ಓ ಶಿವಶಂಕರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದರು.
9 ದಿನದ ಕಾರ್ಯಾಚರಣೆ ಯಶಸ್ವಿ:ಕಾಡಾನೆ ಹಿಡಿಯಲು ಕಳೆದ 9 ದಿನದ ಹಿಂದೆ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. ಸಕ್ರೆಬೈಲು ಆನೆ ಬಿಡಾರದ ಸಾಗರ್, ಬಾಲಣ್ಣ, ಬಹದ್ದೂರ್ ಹಾಗೂ ಭಾನುಮತಿ ಆನೆಯನ್ನು ಕರೆದುಕೊಂಡು ಬರಲಾಗಿತ್ತು. ಆಗಾಗ ಒಂಟಿ ಸಲಗ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದಾರೂ ಸೆರೆಗೆ ಸಿಗುತ್ತಿರಲಿಲ್ಲ. ಇದಕ್ಕಾಗಿ ಕಾಡಿನಲ್ಲಿ ಭಾನುಮತಿ ಆನೆಯನ್ನು ಕಟ್ಟಿ ಹಾಕಿ, ಕಾಡಾನೆಯನ್ನ ಸೆಳೆಯುವ ಹನಿಟ್ರ್ಯಾಪ್ ತಂತ್ರವನ್ನು ಬಳಕೆ ಮಾಡಲಾಗಿತ್ತು. ಕಾಡಾನೆಯು ರಾತ್ರಿ ವೇಳೆ ಭಾನುಮತಿ ಬಳಿ ಬರುತ್ತಿತ್ತು. ಆದರೆ, ದೂರವೇ ನಿಲ್ಲುತ್ತಿತ್ತು. ಆದರೂ ಛಲ ಬಿಡದ ವೈದ್ಯರು ನಿನ್ನೆ ರಾತ್ರಿ ಸೆರೆ ಹಿಡಿದರು. ಕಾರ್ಯಾಚರಣೆಯಲ್ಲಿ ವೈದ್ಯರ ಜೊತೆ ಸಕ್ರೆಬೈಲು ಆನೆ ಬಿಡಾರದ 15 ಮಾವುತರ ಹಾಗೂ ಕಾವಾಡಿಗರು ಭಾಗಿಯಾಗಿದ್ದರು.