ಕಾಡು ಪ್ರಾಣಿಗಳ ದಾಳಿಗೆ ಬೆಳೆ ನಾಶ.. ಅಳಲು ತೋಡಿಕೊಂಡ ರೈತಾಪಿ ವರ್ಗ ಶಿವಮೊಗ್ಗ: ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷ ಇಂದು ನಿನ್ನೆಯದಲ್ಲ. ಇದು ಅನಾದಿ ಕಾಲದಿಂದಲೂ ಬೆಳೆದುಕೊಂಡು ಬಂದಿದೆ. ಈ ನಡುವೆ ಶಿವಮೊಗ್ಗ ಜಿಲ್ಲೆಯ ಉಂಬ್ಳೆಬೈಲು ಅರಣ್ಯ ವಲಯದ ಭಾಗದಲ್ಲಿ ರೈತರು ಕಾಡು ಪ್ರಾಣಿಗಳ ಹಾವಳಿಯಿಂದ ಹೈರಾಣಾಗಿದ್ದಾರೆ. ಪ್ರತಿ ಬಾರಿ ಬೆಳೆ ಬೆಳೆದು ಅದನ್ನು ಮನೆಗೆ ತರುವಲ್ಲಿ ಸಾಕಪ್ಪ ಎನ್ನಿಸುವಷ್ಟು ವನ್ಯಜೀವಿಗಳು ಹಾನಿಯನ್ನುಂಟು ಮಾಡುತ್ತಿವೆ.
ಉಂಬ್ಳೆಬೈಲು ವಲಯದ ಹಲವು ಗ್ರಾಮಗಳು ಕಾಡಿನಂಚಿನ ಗ್ರಾಮಗಳಾಗಿವೆ. ಈ ಭಾಗದಲ್ಲಿ ಅಡಕೆ ತೋಟದ ಜೊತೆಗೆ ಭತ್ತದ ಗದ್ದೆಗಳು ಇವೆ. ಭತ್ತ ನಾಟಿ ಮಾಡಿದಾಗ ಜಿಂಕೆ ಸೇರಿದಂತೆ ಸಾರಂಗದಂತಹ ಪ್ರಾಣಿಗಳು ಬಂದು ಬೆಳೆ ತಿಂದು ಹಾಕುತ್ತವೆ. ಇದರಿಂದ ಉಂಬ್ಳೆಬೈಲು, ಕೈದೂಟ್ಲು ಸೇರಿದಂತೆ ಅನೇಕ ಗ್ರಾಮಗಳ ರೈತರು ಪ್ರತಿ ವರ್ಷ ಸಾವಿರಾರು ರೂ. ನಷ್ಟ ಅನುಭವಿಸುತ್ತಿದ್ದಾರೆ.
ಜಿಂಕೆಗಳಿಂದ ತಮ್ಮ ಬೆಳೆಯನ್ನು ಉಳಿಸಿಕೊಂಡು ಫಸಲು ಮನೆಗೆ ತೆಗೆದುಕೊಂಡು ಹೋಗೋಣ ಎನ್ನುವಷ್ಟರಲ್ಲಿ ಕಟಾವಿಗೆ ಬಂದ ಬೆಳೆಯನ್ನು ಕಾಡಾನೆಗಳು ಹಿಂಡು ಹಿಂಡಾಗಿ ಬಂದು ತಿಂದು ನಾಶ ಮಾಡಿ ಹೋಗುತ್ತಿವೆ. ಭತ್ತ ತಿನ್ನಲು ಬಂದಾಗ ಪಕ್ಕದ ಅಡಿಕೆ ತೋಟಗಳಿಗೆ ನುಗ್ಗಿ ಅಡಕೆ ಹಾಗೂ ತೆಂಗಿನ ಮರಗಳನ್ನು ಉರುಳಿಸುತ್ತಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಜೀವ ಭಯದಲ್ಲಿ ಕಾಲ ಕಳೆಯುತ್ತಿರುವ ಗ್ರಾಮಸ್ಥರು: ಕಾಡಂಚಿನ ಗ್ರಾಮಗಳಾದ ಕಾರಣ ಇಲ್ಲಿನ ಗ್ರಾಮಸ್ಥರು ತಮ್ಮ ಜಾನುವಾರುಗಳನ್ನು ಮೇಯಿಸಲು ಕಾಡಿಗೆ ಹೋಗಬೇಕು. ಹೀಗೆ ಕಾಡಿಗೆ ಹೋದ ಜಾನುವಾರುಗಳನ್ನು ಹುಲಿ ಬೇಟೆಯಾಡುತ್ತಿವೆ. ಇದರಿಂದ ಹೈನುಗಾರಿಕೆಗೂ ತೊಡಕಾಗಿದೆ. ಒಂದೆಡೆ ಬೆಳೆ ನಷ್ಟ, ಇನ್ನೊಂದೆಡೆ ಜೀವ ಭಯದಿಂದ ಗ್ರಾಮಸ್ಥರು ಜೀವನ ಸಾಗಿಸಬೇಕಾದ ಅನಿವಾರ್ಯತೆಯಲ್ಲಿದಾರೆ.
ಉಂಬ್ಳೆಬೈಲು ಸುತ್ತಮುತ್ತ ಪ್ರದೇಶ ತುಂಗಾ ಹಾಗೂ ಭದ್ರಾ ಹಿನ್ನೀರಿ ಪ್ರದೇಶದ ನಡುವೆ ಇದೆ. ಇದರಿಂದ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದೆ. ಆನೆಗಳು ಏಕಾಏಕಿ ನಮ್ಮ ತೋಟ, ಗದ್ದೆಗಳಿಗೆ ನುಗ್ಗುತ್ತಿವೆ. ಒಂದೆರಡು ಆನೆಗಳು ಬಂದರೆ ನಾವೇ ಓಡಿಸಬಹುದು. ಆದರೆ, ಹತ್ತಾರು ಆನೆಗಳು ಬಂದ್ರೆ ನಾವೇನು? ಮಾಡಬೇಕು. ಆನೆಗಳು ಬಂದರೆ ಅರಣ್ಯ ಇಲಾಖೆಯವರು ಬಂದು ಪಟಾಕಿ ಹೊಡೆದು ಹೋಗುತ್ತಾರೆ. ಆದರೆ, ಇತ್ತೀಚೆಗೆ ಆನೆಗಳು ಪಟಾಕಿ ಶಬ್ದಕ್ಕೂ ಹೆದರುತ್ತಿಲ್ಲ. ಆನೆಗಳು ಬಂದು ನಮ್ಮ ಬೆಳೆಯನ್ನು ತಿಂದು ಹಾಕುತ್ತವೆ. ಆನೆ ಓಡಿಸಲು ನಮಗೆ ಐದಾರು ಪಟಾಕಿ ಕೊಡುತ್ತಾರಷ್ಟೆ. ಆನೆಗಳನ್ನು ಓಡಿಸಲು ಬರುವ ಅರಣ್ಯ ಸಿಬ್ಬಂದಿ ಹೆದರಿಕೆಯಿಂದ ವಾಪಸ್ ಹೋಗುತ್ತಾರೆ. ಕಾಡಾನೆ ಓಡಿಸಲು ಮಾವುತರನ್ನು ಕರೆಯಿಸುತ್ತೇವೆ ಎಂದು ಇಲಾಖೆಯವರೇ ಹೇಳ್ತಾರೆ. ಓಡಿಸಲು ಇವುಗಳೇನು ಸಾಕಾನೆಯೇ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.
ಕಾಡು ಪ್ರಾಣಿಗಳ ಹಾವಳಿಯಿಂದ ರಕ್ಷಿಸಿ:ನಾಶ ಮಾಡಿದ ಬೆಳೆಗಳ ಕುರಿತು ಬಂದು ಫೋಟೋ ತೆಗೆದುಕೊಂಡು ಹೋಗುತ್ತಾರೆ. ದುಡ್ಡು ಮಾತ್ರ ಕಡಿಮೆ ಕೊಡುತ್ತಾರೆ. ಅದು ಮುಂದಿನ ವರ್ಷ ಹಣ ನೀಡುತ್ತಾರೆ. ಅದು ನಮ್ಮ ಬೆಳೆಗಳಿಗೆ ಸಾಕಾಗುವುದಿಲ್ಲ. ಆನೆಗಳನ್ನು ಓಡಿಸಲು ಹೋದರೆ ಅವುಗಳು ಮನೆಗಳ ಮೇಲೆ ದಾಳಿ ಮಾಡಲು ಬರುತ್ತವೆ. ಅರಣ್ಯ ಇಲಾಖೆರವರು ಬೆಂಕಿ ಹಾಕಿಕೊಂಡು ಇರಿ ಎಂದು ಹೇಳುತ್ತಾರೆ. ಆದರೆ ಕಟ್ಟಿಗೆ ತರಲು ಮತ್ತೆ ನಾವು ಕಾಡಿಗೆ ಹೋಗಬೇಕು. ಆದರೆ, ಅಲ್ಲಿ ಮತ್ತೆ ಅರಣ್ಯ ಇಲಾಖೆರವರು ನಮಗೆ ಕಟ್ಟಿಗೆ ಕಡಿಯಲು ಬಿಡುವುದಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಕಾಡು ಪ್ರಾಣಿಗಳ ಹಾವಳಿಯಿಂದ ತಮ್ಮ ತೋಟ, ಗದ್ದೆಗಳನ್ನು ರಕ್ಷಿಸಿ ಎಂದು ರೈತಾಪಿ ವರ್ಗ ಆಗ್ರಹಿಸಿದೆ.
'ಆನೆಗಳು ನಮ್ಮ ತೋಟ, ಗದ್ದೆಗಳಿಗೆ ಬರುವುದನ್ನು ದಯವಿಟ್ಟು ಕಂಟ್ರೋಲ್ ಮಾಡಿ. ನಾವು ಉಂಬ್ಳೆಬೈಲು ಅರಣ್ಯಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ರಾತ್ರಿ ವೇಳೆ ನಾವು ನಿದ್ದೆ ಬಿಟ್ಟು ನಮ್ಮ ಫಸಲುಗಳನ್ನು ಕಾದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ' ಎನ್ನುತ್ತಾರೆ ರೈತ ಮಹಿಳೆ ಲಕ್ಷ್ಮಮ್ಮ.
ನಮ್ಮ ಭಾಗದಲ್ಲಿ ಸುಮಾರು10ಕ್ಕೂ ಅಧಿಕ ಆನೆಗಳಿವೆ. ಇನ್ನೂ ಜಿಂಕೆ ಹಾಗೂ ಕಡವೆಗಳು ಸಾಕಷ್ಟಿವೆ. ಚಿರತೆ ಕಾಟದಿಂದ ನಾವು ಕಾಡಿಗೆ ಹೋಗದ ಸ್ಥಿತಿ ಬಂದಿದೆ. ಅರಣ್ಯ ಇಲಾಖೆಯವರು ನಾವು ದೊಡ್ಡ ಟ್ರಚ್ ಮಾಡಿದ್ದೇವೆ ಎಂದು ಹೇಳಿದರು. ಆದರೆ, ಆನೆಗಳ ದಾಳಿ ನಿಂತಿಲ್ಲ. ನಮ್ಮ ಬೆಳೆ ರಕ್ಷಣೆಗೆ ಬೇಲಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಕಾಡು ಪ್ರಾಣಿಗಳು ಬೇಲಿ ದಾಟಿ ನಮ್ಮ ಅಡಕೆ ಮರಗಳ್ನು ನಾಶಮಾಡುತ್ತಿವೆ. ನಮ್ಮ ತೋಟದಲ್ಲಿ ಸುಮಾರು 25 ಅಡಕೆ ಮರಗಳನ್ನು ಆನೆಗಳು ಮುರಿದು ಹಾಕಿವೆ. ಇದಕ್ಕೆ ನೀಡುವ ಪರಿಹಾರ ನಮಗೆ ಯಾವುದಕ್ಕೂ ಸಾಕಾಗುವುದಿಲ್ಲ. ಒಂದು ಅಡಕೆ ಮರ ವರ್ಷಕ್ಕೆ ಕನಿಷ್ಟ ಮೂರ್ನಾಲ್ಕು ಕೆ.ಜಿ ಅಡಕೆ ಬಿಡುತ್ತದೆ. ಆದರೆ ಇಲಾಖೆಯವರು ಒಂದು ಮರಕ್ಕೆ 1 ಸಾವಿರ ರೂ ನೀಡಿ ಸುಮ್ಮನಾಗಿ ಬಿಡುತ್ತಾರೆ. ನೂರಾರು ವರ್ಷ ಫಲ ನೀಡುವ ಅಡಕೆ ಮರಗಳನ್ನು ಆನೆಗಳು ಹೀಗೆ ಮಾಡಿದರೆ ಹೇಗೆ? ಎಂದು ರೈತ ರಮೇಶ್ ಅಳಲು ತೋಡಿಕೊಂಡಿದ್ದಾರೆ.
"ಇಲ್ಲಿ ಜಿಂಕೆ, ಆನೆ ಹುಲಿಗಳ ಕಾಟ ಬಹಳ ಆಗಿದೆ. ಆನೆಗಳು ಪ್ರತಿ ಸಾರಿ ಬಂದಾಗಲು ಭಾರಿ ಪ್ರಮಾಣದಲ್ಲಿ ನಷ್ಟವನ್ನಂಟು ಮಾಡುತ್ತಿವೆ. ಭತ್ತ ಮಾಡಿ ಕಟಾವು ಮಾಡುವ ಸಮಯಕ್ಕೆ ಬಂದು ಎಲ್ಲವನ್ನು ತಿಂದು ಹೋಗುತ್ತಿವೆ. ಅರಣ್ಯಾಧಿಕಾರಿಗಳು ಬಂದು ಫೋಟೋ ತೆಗೆದುಕೊಂಡು ಹೋಗ್ತಾರೆ. ಬೆಳೆ ಪರಿಹಾರ ಸರಿಯಾಗಿ ನೀಡಲ್ಲ. ಇನ್ನೂ ಹುಲಿ ಕಾಟವೂ ಹೆಚ್ಚಾಗಿದೆ. ಹಸುಗಳು ಮೇಯಲು ಹೋದರೆ ಹಿಡಿದು ತಿನ್ನುತ್ತಿವೆ. ಈ ಮೊದಲು ನವಿಲುಗಳನ್ನು ನೋಡಲು ಕಾಡಿಗೆ ಹೋಗಬೇಕಿತ್ತು. ಆದರೆ, ಈಗ ಅವುಗಳ ಸಂಖ್ಯೆಯೂ ಹೆಚ್ಚಾಗಿದ್ದು, ತೋಟ ಗದ್ದೆಗಳಲ್ಲಿಯೇ ಇರುತ್ತಿವೆ. ಒಟ್ಟಿನಲ್ಲಿ ಕಾಡು ಪ್ರಾಣಿ-ಪಕ್ಷಿಗಳಿಂದ ನಮ್ಮ ಬೆಳೆ ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ಅರಣ್ಯ ಇಲಾಖೆರವರು ಕೇಳಿದ ಎಲ್ಲ ದಾಖಲೆ ನೀಡಿದರೂ ಸಹ ಇದುವರೆಗೂ ಬೆಳೆ ನಾಶದ ಪರಿಹಾರ ಮಾತ್ರ ಬಂದಿಲ್ಲ" ಎಂದು ರೈತ ಈಶ್ವರ್ ದೂರಿದರು.
ಇದನ್ನೂ ಓದಿ:ಉಂಬ್ಳೆಬೈಲಿನಲ್ಲಿ ಮುಂದುವರೆದ ಕಾಡಾನೆ ಹಾವಳಿ : ಅಡಿಕೆ, ಭತ್ತ ನಾಶ