ಶಿವಮೊಗ್ಗ:ಕಾಂಗ್ರೆಸ್ ಒಡೆಯಲು 500 ಕೋಟಿ ಯಾರು ಹಾಳು ಮಾಡುತ್ತಾರೆ ಗೊತ್ತಿಲ್ಲ. ಕಾಂಗ್ರೆಸ್ ನವರು ಅವರೇ ಒಡೆದಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಒಡೆಯಲು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಯಾಕೆ ಹಣ ಕೊಟ್ಟು ಕಳೆದುಕೊಳ್ಳುತ್ತಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವ್ಯಂಗ್ಯವಾಡಿದರು. ಶಿವಮೊಗ್ಗದ ಗುಂಡಪ್ಪ ಶೆಡ್ 162 ನೇ ಬೂತ್ ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಒಡೆಯಲು 500 ಕೋಟಿ ರೂಪಾಯಿ ಯಾರ್ ಖರ್ಚು ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಫೆಬ್ರವರಿ 5 ರಂದು ಶಿವಮೊಗ್ಗದಲ್ಲಿ ಪೇಜ್ ಪ್ರಮುಖರ ಸಮಾವೇಶ:ಕೆಸಿಆರ್ ಅವರು ಬಡವರ ಉದ್ಧಾರಕ್ಕಾಗಿ ಹಣ ವಿನಿಯೋಗಿಸಲಿ ಎಂದ ಅವರು, ಈಗ ಕಾಂಗ್ರೆಸ್, ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದ್ದಾರೆ. ಆದರೆ ನಾವು ಬಿಜೆಪಿ ಸಂಘಟನೆ ಮೂಲಕ ಎದುರಿಸುತ್ತಿದ್ದೇವೆ. ಅಭ್ಯರ್ಥಿ ಬಗ್ಗೆ ಯಾರು ತಲೆಕೆಡಿಸಿಕೊಳ್ಳಲ್ಲ. ನಮಗೆ ನಮ್ಮ ಪಕ್ಷವೇ ಅಭ್ಯರ್ಥಿ. ಅಧಿಕಾರಕ್ಕೆ ತರಲು ಪ್ರತಿ ಬೂತ್, ಪೇಜ್ ಗಳಲ್ಲೂ ಕಾರ್ಯಕ್ರಮ ನಡೆಸುತ್ತಿದ್ದೇವೆ. ಫೆಬ್ರವರಿ 5 ರಂದು ಶಿವಮೊಗ್ಗದಲ್ಲಿ ಪೇಜ್ ಪ್ರಮುಖರ ಸಮಾವೇಶ ನಡೆಸಲಾಗುತ್ತಿದೆ. ಈ ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ್ ಭಾಗಿಯಾಗಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪ್ರಥಮ ಬಾರಿಗೆ ಪೂರ್ಣ ಬಹುಮತ ಸಿಗುತ್ತದೆ ಎಂದು ಕೆ ಎಸ್ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುವ ಕುರಿತು ಡಿ.ಕೆ.ಶಿವಕುಮಾರ್ ಹೇಳಿಕೆಗೆ ಟಾಂಗ್ :17 ಜನರು ಕಾಂಗ್ರೆಸ್ ನಿಂದ ಬಿಜೆಪಿಗೆ ಯಾಕೆ ಬಂದರು ಹೇಳಲಿ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬೊಗಳೆ ಹೊಡಿತಾ ಇದ್ದಾರೆ. ಸಾಯುವ ಪಾರ್ಟಿಗೆ ಯಾರಾದರು ಹೋಗುತ್ತಾರ ಎಂದು ಪ್ರಶ್ನಿಸಿದರು. ನಳೀನ ಕುಮಾರ್ ಕಟೀಲ್ ಬಗ್ಗೆ ಬಿಕೆ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು ಬಿಕೆ ಹರಿಪ್ರಸಾದ್ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಿಂತರು ಗೆಲ್ಲುವ ಶಕ್ತಿ ಇಲ್ಲ ಎಂದು ಟಾಂಗ್ ಕೊಟ್ಟರು.
ಹೆಚ್ ವಿಶ್ವನಾಥ್ ಅವರಿಗೆ ಎಂಎಲ್ಸಿ ಮಾಡಿದ್ದೇ ಬಿಜೆಪಿ, ಮಂತ್ರಿ ಆಗಬೇಕೆಂಬ ಆಸೆ ಅವರಿಗೆ ಇತ್ತು, ನಾವು ಮಾಡಿಲ್ಲ ಎಂದರು. ಅಸೆಂಬ್ಲಿ ಚುನಾವಣೆಗೆ ನಿಲ್ಲಬೇಡ ಅಂದರು ನಿಂತು ಸೋತರು. ಆದರೂ ಋಣ ತೀರಿಸಲು ಅವರನ್ನು ಎಂಎಲ್ಸಿ ಮಾಡಿದ್ದೆವು. ಇನ್ನು, ಬಿಜೆಪಿ ಟಿಕೆಟ್ ಸಿಗುವುದಿಲ್ಲ ಅಂತ ಗೂತ್ತಾಯ್ತು. ಹೀಗಾಗಿ ಕಾಂಗ್ರೆಸ್ ಗೆ ಹೋಗ್ತಾ ಇದ್ದಾರೆ. ನಮ್ಮದೇನೂ ಅಭ್ಯಂತರವಿಲ್ಲ. ಅವರಿಗಿಂತ, ಅವರ ಮಕ್ಕಳಿಗೆ ಜಿಲ್ಲಾ ಪಂಚಾಯತ್ ಸೀಟು ಮತ್ತೇನನ್ನೋ ನೀಡುವ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮಾತು ಕೊಟ್ಟಿರಬಹುದು ಎಂದರು.