ಶಿವಮೊಗ್ಗ:ಸೊರಬ ಅಂದ್ರೆ ತಕ್ಷಣ ನೆನಪಾಗುವುದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ. ಬಂಗಾರಪ್ಪ ರಾಜ್ಯ ಕಂಡ ವರ್ಣ ರಂಜಿತ ರಾಜಕಾರಣಿಗಳಲ್ಲಿ ಒಬ್ಬರು. ಇವರು ಯಾವ ಪಕ್ಷದಲ್ಲಿ ಇರುತ್ತಾರೂ ಆ ಪಕ್ಷ ಜಯಭೇರಿ ಭಾರಿಸುತ್ತದೆ ಎಂಬಂತೆ ಇದ್ದವರು. ಎಸ್.ಬಂಗಾರಪ್ಪ ನಂತರ ಸೊರಬ ಕ್ಷೇತ್ರದಲ್ಲಿ ಅವರ ಇಬ್ಬರು ಮಕ್ಕಳ ಪೈಪೋಟಿಯ ರಾಜಕಾರಣ ನಡೆಯುತ್ತಿದೆ. ಈ ಭಾರಿಯ ಸಹೋದರರ ಸವಾಲ್ನಲ್ಲಿ ಗೆಲ್ಲುವವರು ಯಾರು ಎಂಬುದಕ್ಕೆ ಮೇ 13ರ ತನಕ ಕಾಯಬೇಕಿದೆ. ಸೊರಬ ಕ್ಷೇತ್ರ ಅಂದ್ರೆ ನಂಜುಂಡಪ್ಪ ವರದಿಯ ಪ್ರಕಾರ ಹಿಂದುಳಿದ ತಾಲೂಕು ಆಗಿತ್ತು. ಈ ಭಾಗದಲ್ಲಿ ಕೈಗೊಂಡ ಅನೇಕ ಅಭಿವೃದ್ಧಿ ಕಾರ್ಯಗಳಿಂದ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯಿಂದ ಹೊರ ಬರುತ್ತಿದೆ.
ಸೊರಬದ ಇತಿಹಾಸ:ಸೊರಬ ತಾಲೂಕು ಮಲೆನಾಡಿನ ಸುಂದರ ತಾಲೂಕು. ಇಲ್ಲಿ ದಟ್ಟ ಕಾನನ, ರೇಣುಕಾದೇವಿ ದೇವಾಲಯ, ಪ್ರಸಿದ್ದ ಗುಡವಿ ಪಕ್ಷಿಧಾಮ. ಕೋಟಿಪುರದ ಸುಂದರ ಕತ್ತೆನೆಯ ದೇವಾಲಯಗಳು ತಾಲೂಕನ್ನು ಶ್ರೀಮಂತಗೊಳಿಸಿದೆ. ಸೊರಬವನ್ನು ಹಿಂದೆ ಸುರಭಿಪುರ ಎಂದು ಕರೆಯುತ್ತಿದ್ದರು. ಏಷ್ಯಾದ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ತಾಲೂಕು ಅಂದ್ರೆ ಅದು ಸೊರಬ. ಇಂತಹ ಸೊರಬ ತಾಲೂಕು ರಾಜ್ಯಕ್ಕೆ ಓರ್ವ ಮುಖ್ಯಮಂತ್ರಿ ಹಾಗೂ ಇಬ್ಬರನ್ನು ಮಂತ್ರಿಗಳಾಗಿ ನೀಡಿದೆ. ಬಂಗಾರಪ್ಪ ಸಿಎಂ ಆಗಿದ್ದರು. ಅವರ ಪುತ್ರ ಕುಮಾರ ಬಂಗಾರಪ್ಪನವರು ಮಂತ್ರಿ ಆಗಿದ್ದರು. ಅಲ್ಲದೇ ಸೊರಬದಿಂದ ಗೆದ್ದಿದ್ದ ಹಾಲಪ್ಪ ಹರತಾಳು ಅವರು ಸಹ ಮಂತ್ರಿಯಾಗಿದ್ದರು.
ಐದನೇ ಬಾರಿಗೆ ಎದುರಾಳಿಗಳಾಗಿರುವ ಬಂಗಾರಪ್ಪ ಸಹೋದರರು:ಎಸ್.ಬಂಗಾರಪ್ಪ ಪುತ್ರರಾದ ಕುಮಾರ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಕಳೆದ ಐದು ಚುನಾವಣೆಗಳಿಂದ ಎದುರಾಳಿಗಳಾಗುತ್ತಿದ್ದಾರೆ. ಎಸ್.ಬಂಗಾರಪ್ಪನವರು ರಾಜ್ಯ ರಾಜಕೀಯದಿಂದ ರಾಷ್ಟ್ರೀಯ ರಾಜಕೀಯದ ಕಡೆ ಮುಖ ಮಾಡಿದಾಗ ಅವರ ಹಿರಿಯ ಮಗ ಕುಮಾರ ಬಂಗಾರಪ್ಪ ಅವರನ್ನು ಸೊರಬ ಕ್ಷೇತ್ರದಲ್ಲಿ ತಮ್ಮ ಉತ್ತರಾಧಿಕಾರಿಯಾಗಿ ಮಾಡಿದರು. ಕುಮಾರ ಬಂಗಾರಪ್ಪ 1999ರಲ್ಲಿ ಸೊರಬದಲ್ಲಿ ಪ್ರಥಮ ಭಾರಿ ರಾಜಕೀಯ ಕಣಕ್ಕೆ ಬರುತ್ತಾರೆ. ತಂದೆಯ ಆರ್ಶೀವಾದದಿಂದ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸುತ್ತಾರೆ. ಈ ವೇಳೆಗಾಗಲೆ ಬಂಗಾರಪ್ಪ ಕುಟುಂಬದಲ್ಲಿ ಬಿರುಕು ಉಂಟಾಗಿರುತ್ತದೆ. 2004ರ ಹೂತ್ತಿಗೆ ಬಂಗಾರಪ್ಪನವರು ಬಿಜೆಪಿ ಸೇರ್ಪಡೆಗೊಂಡರು. ಆಗ ಮೊದಲ ಬಾರಿಗೆ ಮಧು ಬಂಗಾರಪ್ಪ ರಾಜಕೀಯಕ್ಕೆ ಬಂದು ಸ್ಪರ್ಧೆ ಮಾಡುತ್ತಾರೆ. ಪ್ರಥಮ ಬಾರಿಯೇ ತಮ್ಮ ಸಹೋದರನ ವಿರುದ್ಧ ಸೋಲು ಅನುಭವಿಸುತ್ತಾರೆ. ಇದವರೆಗೂ ಐದನೇ ಭಾರಿ ಎದುರಾಳಿಗಳಾಗಿದ್ದಾರೆ. ಮಧು ಬಂಗಾರಪ್ಪ 2013ರಲ್ಲಿ ಒಮ್ಮೆ ಮಾತ್ರ ಗೆಲುವು ಕಂಡಿದ್ದಾರೆ. ಕುಟುಂಬದಲ್ಲಿ ಕುಮಾರ ಬಂಗಾರಪ್ಪ ಒಂದು ಕಡೆ ಆಗಿದ್ರೆ ಬಂಗಾರಪ್ಪನವರ ಹೆಣ್ಣು ಮಕ್ಕಳು ಮಧು ಬಂಗಾರಪ್ಪನವರ ಕಡೆ ಇದ್ದಾರೆ.
ಕುಮಾರ ಬಂಗಾರಪ್ಪ 1999 ರಿಂದ 2013ರ ತನಕ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದಾರೆ. ಇದು ಇವರ ರಾಜಕೀಯದ ತಿರುವು ಕೂಡಾ ಆಗಿದೆ ಎನ್ನಬಹುದು. ಈಗ ಕುಮಾರ ಬಂಗಾರಪ್ಪ ಎರಡನೇ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಇವರು ಒಮ್ಮೆ ಸಣ್ಣ ನೀರಾವರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಮಧು ಬಂಗಾರಪ್ಪ ತಮ್ಮ ವಹಿವಾಟಿನ ಜೊತೆಗೆ ರಾಜಕೀಯವನ್ನು ಸಹ ನಡೆಸಿಕೊಂಡು ಬಂದಿದ್ದಾರೆ. ಮಧು ಬಂಗಾರಪ್ಪ ತಮ್ಮ ತಂದೆ ಬಂಗಾರಪ್ಪ ಅವರನ್ನು ಹಿಂಬಾಲಿಸಿಕೊಂಡು ತಂದೆ ಹೋದ ಪಕ್ಷಕ್ಕೆ ಹೋದವರು. ತಮ್ಮ ರಾಜಕೀಯವನ್ನು ಬಿಜೆಪಿಯಿಂದ ಸ್ಪರ್ಧೆ ಮಾಡುವ ಪ್ರಾರಂಭಿಸಿದ ಇವರು ನಂತರ, ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದರು. ಜೆಡಿಎಸ್ ಪಕ್ಷ ಸೇರ್ಪಡೆಗೊಂಡು ಚುನಾವಣೆಗೆ ಸ್ಪರ್ಧೆ ಮಾಡಿದರು. ಇವರು ಜೆಡಿಎಸ್ ನ ಯುವ ಘಟಕದ ರಾಜ್ಯಾಧ್ಯಕ್ಷರೂ ಕೂಡಾ ಆಗಿದ್ದರು. ಬದಲಾದ ಕಾಲಘಟ್ಟದಲ್ಲಿ ಶಿವಮೊಗ್ಗ ಲೋಕಸಭೆಗೆ ಸ್ಪರ್ಧೆ ಮಾಡಿದರು. ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದರು. ಸ್ಪರ್ಧೆಯಿಂದ ಸೋಲನ್ನು ಅನುಭವಿಸಿದರು. ಡಿ.ಕೆ.ಶಿವಕುಮಾರ್ ಅವರು ಅಧ್ಯಕ್ಷರಾದ ಮೇಲೆ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ಭಾರಿ ಸೊರಬದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ.