ಶಿವಮೊಗ್ಗ: ಜಿಲ್ಲೆಯ ರುದ್ರಭೂಮಿಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಇಲ್ಲಿಗೆ ಬಂದವರು ಆಡಳಿತ ನಡೆಸುವವರಿಗೆ ಹಿಡಿಶಾಪ ಹಾಕಿಯೇ ಹೋಗುವ ದುಸ್ಥಿತಿ ನಿರ್ಮಾಣವಾಗಿವೆ.
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಐದಾರು ಹಿಂದೂ ರುದ್ರಭೂಮಿಗಳಿವೆ. ಇದರಲ್ಲಿ ಶರಾವತಿ ನಗರದ ರುದ್ರಭೂಮಿಯು ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾದ ರುದ್ರಭೂಮಿಯಾಗಿದೆ. ಇದು ನಗರದ ಹೃದಯ ಭಾಗದಲ್ಲಿದೆ. ಆದರೂ ಇಲ್ಲಿನ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ.
ಮೂಲ ಸೌಕರ್ಯಗಳಿಲ್ಲದ ರುದ್ರಭೂಮಿ:
ಇಲ್ಲಿ ಒಂದು ಕೊಳವೆ ಬಾವಿ ಬಿಟ್ಟರೆ ಬೇರೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಇಲ್ಲಿಗೆ ಕಾಲಿಟ್ಟರೆ ಸಾಕು ಭಯದಿಂದ ಓಡಿ ಹೋಗುವ ಸ್ಥಿತಿ ಇದೆ. ಇಲ್ಲಿ ಸತ್ತವರ ಸಂಬಂಧಿಗಳು ಗೋರಿಗಳನ್ನು ಕಟ್ಟಿ ಅಂದವನ್ನು ಹಾಳುಗೆಡವಿದ್ದಾರೆ. ಇಲ್ಲಿ ಸಂಜೆಯಾದ್ರೆ ಕನಿಷ್ಠ ಒಂದು ವಿದ್ಯುತ್ ದೀಪದ ಸೌಲಭ್ಯವಿಲ್ಲ. ಶವಗಳನ್ನು ತೆಗೆದುಕೊಂಡು ಹೋಗಲು ಸೂಕ್ತ ದಾರಿ ಸಹ ಇಲ್ಲದಂತಾಗಿದೆ. ಈ ರುದ್ರಭೂಮಿಯಲ್ಲಿ ಓಡಾಡಲು ಜಾಗವಿಲ್ಲ. ಶವ ದಹನ ಮಾಡುವ ಒಲೆಗಳು ಸರಿಯಾಗಿಲ್ಲ. ಒಲೆಗಳು ಸುಟ್ಟು ತೂತು ಬಿದ್ದಿವೆ. ಶವ ಸಂಸ್ಕಾರಕ್ಕೆ ಬರುವವರಿಗೆ ಕನಿಷ್ಠ ಶೌಚಾಲಯವಿಲ್ಲ. ರುದ್ರಭೂಮಿ ಕಸದಿಂದ ತುಂಬಿ ಹೋಗಿದೆ.
ರುದ್ರಭೂಮಿ ನಿರ್ವಹಣೆಗೆ ಸಮಿತಿಯ ಅಗತ್ಯ:
ಪಾಲಿಕೆ ಮಾಜಿ ಸದಸ್ಯ ಪಾಲಾಕ್ಷ ತಮ್ಮ ಅವಧಿಯಲ್ಲಿ 3.50 ಲಕ್ಷ ರೂ. ಅನುದಾನ ನೀಡಿ ವಾಕಿಂಗ್ ಪಾಥ್, ನಾಲ್ಕೈದು ವಿದ್ಯುತ್ ದೀಪ ಹಾಕಿಸಿದ್ದರು. ಆದರೆ ಅವುಗಳ ನಿರ್ವಹಣೆ ಇಲ್ಲದೆ ಎಲ್ಲವು ಹಾಳಾಗಿವೆ. ರುದ್ರಭೂಮಿಯು ಪೋಲಿಗಳ ತಾಣವಾಗಿದೆ. ಇಲ್ಲಿ ಶವವನ್ನು ಹೂಳಲು ಗುಂಡಿ ತೆಗೆಯಲು ಸೇರಿದಂತೆ ಇತರೆ ಕಾರ್ಯಗಳಿಗೆ ಹೆಚ್ಚಿನ ದರ ಪಡೆಯುತ್ತಾರೆ ಎಂಬ ದೂರಿದೆ. ಇಲ್ಲಿಗೆ ಒಂದು ಸಮಿತಿ ರಚನೆ ಮಾಡಿ ರುದ್ರಭೂಮಿ ನಿರ್ವಹಣೆ ಮಾಡುವ ಅವಶ್ಯಕತೆ ಇದೆ.