ಶಿವಮೊಗ್ಗ:ಮಧುಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆ ಶಿವಮೊಗ್ಗ ನಗರ ಹಾಗೂ ಕುಂಸಿ ಭಾಗದ ಜೆಡಿಎಸ್ ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುತ್ತಿದ್ದೇವೆ ಎಂದು ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಜಿ.ಡಿ.ಮಂಜುನಾಥ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಬಂಗಾರಪ್ಪನವರು ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆಗೊಂಡಾಗ ಅವರನ್ನು ಬೆಂಬಲಿಸಿ ನಾವು ಸಹ ಜೆಡಿಎಸ್‌ಗೆ ಸೇರಿದ್ದೆವು. ಈಗ ಮಧು ಬಂಗಾರಪ್ಪನವರನ್ನು ಬೆಂಬಲಿಸುತ್ತಿದ್ದೇವೆ ಎಂದ ಅವರು, ಇಂದೇ ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಇಂದಿನಿಂದಲೇ ನಾವು ಕಾಂಗ್ರೆಸ್ಸಿಗರು ಎಂದರು.
ಸಮಾಜವಾದಿ ನೆಲೆಯಾಗಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣೆಯಲ್ಲಿ ಜ್ಯಾತ್ಯಾತೀತ ಪಕ್ಷಗಳು ಜಯಭೇರಿ ಬಾರಿಸುತ್ತಿದ್ದವು. ಆದರೆ ಇಂದು ಬಿಜೆಪಿ ದೊಡ್ಡಮಟ್ಟದಲ್ಲಿ ಬೆಳೆಯುತ್ತಿದೆ. ಇದರಿಂದಾಗಿ ಜ್ಯಾತ್ಯಾತೀತ ಪಕ್ಷಗಳಿಗೆ ಹಿನ್ನಡೆಯಾಗಿರುವುದರಿಂದ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ಬಲತುಂಬಲು ಮಧು ಬಂಗಾರಪ್ಪ ಅವರು ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುತ್ತಿದ್ದು, ಇವರನ್ನು ಬೆಂಬಲಿಸಿ ಜಿಲ್ಲೆಯ ಬಹುತೇಕ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದೇವೆ ಎಂದು ಹೇಳಿದರು.