ಶಿವಮೊಗ್ಗ: ಪ್ರಧಾನಿ ಮೋದಿ ರೈತರಿಗಾಗಿ ಜಾರಿಗೆ ತಂದ ಕಿಸಾನ್ ಸಮ್ಮಾನ್ ಯೋಜನೆಯ ಲಾಭವನ್ನು ರಾಜ್ಯದ ರೈತರಿಗೆ ತಲುಪಿಸಲು ಮೈತ್ರಿ ಸರ್ಕಾರ ಸಹಕರಿಸುತ್ತಿಲ್ಲ ಎಂದು ದೇಶದ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಎನ್ಇಎಸ್ ಮೈದಾನದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ಮೋದಿ ಅವರು ದೇಶದ ಗಡಿ ಕಾಯುವ ಸೈನಿಕರಿಗೆ ಹಾಗೂ ದೇಶದ ರೈತರಿಗೆ ಸಾಕಷ್ಟು ಗೌರವ ನೀಡುತ್ತಾರೆ. ಅದಕ್ಕಾಗಿ ದೇಶದ ರೈತರಿಗೆ ಗೌರವ ನೀಡುವ ಸಲುವಾಗಿ ಜಾರಿಗೆ ತಂದ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಪ್ರತಿ ರೈತರಿಗೆ 6 ಸಾವಿರ ರೂ. ನೀಡುವ ಯೋಜನೆ ಜಾರಿಗೆ ತರಲಾಗಿದೆ.
ಯಾವುದೇ ದೇಶಕ್ಕಾಗಲಿ ಮಾಣಿಕ್ಯ ಮತ್ತೆ ಮತ್ತೆ ಸಿಗೋದಿಲ್ಲ. ನಮಗೆ ಸಿಕ್ಕಿರುವ ಮಾಣಿಕ್ಯ ಅಂದ್ರೆ ಅದು ನರೇಂದ್ರ ಮೋದಿ. ಅವರನ್ನು ಉಳಿಸಿಕೊಂಡು ದೇಶದ ಅಭಿವೃದ್ಧಿಗೆ ಸಹಕರಿಸಿ ಎಂದರು. 1971 ರಲ್ಲಿ ಕಾಂಗ್ರೆಸ್ ಇಂದಿರಾ ಗಾಂಧಿ ಅವರು ಗರೀಬಿ ಹಟಾವೋ ಎಂದರು. ನಂತ್ರ ರಾಜೀವ್ ಗಾಂಧಿ ಅವರು ಸಹ ಅದನ್ನೆ ಹೇಳಿದ್ರು, ಇನ್ನು ಮನಮೋಹನ್ ಸಿಂಗ್, ಬಜೆಟ್ ಮೊದಲಿಗೆ ಈ ದೇಶದ ಅಲ್ಪ ಸಂಖ್ಯಾಂತರಿಗೆ ಮೀಸಲು ಎಂದರು. ಈಗ ಗರೀಬಿ ಹಟಾವೋ ಘೋಷಣೆಯನ್ನೇ ’ನ್ಯಾಯ್’ ಎಂದು ಮರು ನಾಮಕರಣ ಮಾಡಿ ಜನರ ಮುಂದೆ ಬರುತ್ತಿದ್ದಾರೆ. ದೇಶದ ಅಭಿವೃದ್ದಿ ಕುರಿತು ದೂರದೃಷ್ಟಿ ಹೊಂದಿರುವ ಮೋದಿಯವರನ್ನೇ ಗೆಲ್ಲಿಸಿ. ಇದಕ್ಕಾಗಿ ಶಿವಮೊಗ್ಗದಲ್ಲಿ ರಾಘಣ್ಣನಿಗೆ ಆಶೀರ್ವದಿಸಿ ಎಂದು ವಿನಂತಿ ಮಾಡಿಕೊಂಡರು.
ಪಾಕಿಸ್ತಾನದವರಿಗೆ ನಿರ್ಮಲಾ ಸೀತಾರಾಮನ್ ದುರ್ಗಾಮಾತೆ:
ದುಷ್ಟರನ್ನು ಕೊಲ್ಲಲು ದುರ್ಗಾಮಾತೆ ಬರುತ್ತಾಳೆ. ಪಾಕಿಸ್ತಾನದವರ ಪಾಲಿಗೆ ನಿರ್ಮಲಾ ಸೀತಾರಾಮನ್, ನಿಜವಾಗ್ಲೂ ದುರ್ಗಾ ಮಾತೆಯಾಗಿದ್ದಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಆಭಿಪ್ರಾಯಪಟ್ಟರು. ಮಹಿಳಾ ಸಮಾವೇಶದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ನಮ್ಮ ಅಭ್ಯರ್ಥಿ ರಾಘವೇಂದ್ರ ಅವರಿಗೆ ತಾಯಿ ಇಲ್ಲ. ಇದರಿಂದ ಜಿಲ್ಲೆಯ ಮಾತೆಯರೇ ರಾಘವೇಂದ್ರಗೆ ತಾಯಂದಿರಾಗಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.