ಶಿವಮೊಗ್ಗ: ಬಿಜೆಪಿ ಬಹಳ ಕಡೆ ಮುಸ್ಲಿಂ ವೋಟ್ಗಳ ಮೇಲೆ ಅವಲಂಬಿತವಾಗಿಲ್ಲ. ಶಿವಮೊಗ್ಗದಲ್ಲಂತೂ ಹಾಗೇ ಇಲ್ಲ, ನಾನು ಅವರ ಬೀದಿಗೆ ಹೋಗಿ ಮತ ಕೇಳಿಲ್ಲ. ಆದ್ರೂ ಅವರು ವೋಟು ಕೊಡ್ತಾ ಇದ್ದಾರೆ. ಕಾರಣ ಅಭಿವೃದ್ಧಿ ಕೆಲಸ ಆಗ್ತಾ ಇದೆ. ಹಾಗಾಗಿ ಅದನ್ನು ನೋಡಿ ನಮಗೆ ವೋಟ್ ಕೊಡ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ಗೆ ಬೈಯುವ ಕೆಟ್ಟ ಚಾಳಿ ಸಿದ್ದರಾಮಯ್ಯಗೆ ಇತ್ತು. ಒಂದು ಏರಿಯಾದಲ್ಲಿ ರಸ್ತೆ ಹಾಳಾಗಿರೋದು ನಿಜ. ಪ್ರಧಾನಿ ಮೋದಿ ಬೆಂಗಳೂರು-ಮೈಸೂರಿಗೆ ಬೇಕಾದಷ್ಟು ಕೆಲಸ ಮಾಡಿದ್ದಾರೆ. ರಸ್ತೆ ಹಾಳಾಗಿರೋದು ತಪ್ಪೇ. ಅರ್ಜೆಂಟ್ನಲ್ಲಿ ಮಾಡುವಾಗ ಹಾಳಾಗಿದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ. ಅದಕ್ಕೋಸ್ಕರ 40% ಸರ್ಕಾರ ಎನ್ನುವುದು ಸರಿ ಅಲ್ಲ ಎಂದರು.
ಮುಸ್ಲಿಂ ಓಲೈಕೆಗೆ ಆರ್ಎಸ್ಎಸ್ ಬೈತಾರೆ:ಕಂಟ್ರ್ಯಾಕ್ಟರ್ ಹಣ ಕೊಟ್ಟಿರೋದು ಸಾಬೀತು ಮಾಡಲಿ. ಪದೇ ಪದೇ ಪರ್ಸೆಂಟ್ ಕಮಿಷನ್ ಬಗ್ಗೆ ಹೇಳ್ತಾ ಹೋದರೆ ಉತ್ತರ ಕೊಡಲಾಗದು. ಆರ್ಎಸ್ಎಸ್ ವಿರುದ್ಧ ಹೇಳಿಕೆ ನೀಡುವುದು ಸಿದ್ದರಾಮಯ್ಯ ಚಾಳಿ, ಆ ಚಾಳಿ ಈಗ ಕುಮಾರಸ್ವಾಮಿಗೆ ಬಂದಿದೆ. ಕಾಂಗ್ರೆಸ್-ಜೆಡಿಎಸ್ ನಾಯಕರು ಮುಸ್ಲಿಂ ಓಲೈಕೆಗೆ ಆರ್ಎಸ್ಎಸ್ ಬೈಯ್ತಾರೆ. ಅವರ ವೋಟು ಬಂದು ಬಿಡುತ್ತೆ ಎಂಬ ಚಿಂತನೆಯಲ್ಲಿದ್ದಾರೆ. ಅವರ ಮತಗಳನ್ನ ನೀವು ತಗೊಳ್ಳಿ. ಬಿಜೆಪಿ ಬಹಳ ಕಡೆ ಮುಸ್ಲಿಂ ಮತಗಳನ್ನು ಅವಲಂಬಿಸಿಲ್ಲ. ಜನ ವೋಟು ಕೊಡ್ತಾ ಇದ್ದಾರೆ, ಅಭಿವೃದ್ಧಿ ಕೆಲಸ ಆಗ್ತಾ ಇದೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.