ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ಬಿಜೆಪಿಯನ್ನು ಸೋಲಿಸಲು ನಾನು ಹಾಗೂ ಮಂಜುನಾಥ ಗೌಡರು ಒಟ್ಟಿಗೆ ಸೇರಿದ್ದೇವೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಭನವದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಜುನಾಥ ಗೌಡ ಅವರು ಸಹ ನಮ್ಮ ಜೊತೆ ಬಂದಿರುವುದು ಸಂತೋಷವಾಗಿದೆ. ನಾವಿಬ್ಬರು ಒಟ್ಟಿಗೆ ಇದ್ದೇವೆ. ಬಿಜೆಪಿ ಸೋಲಿಸಲು ನಾವಿಬ್ಬರು ಒಂದಾಗಿದ್ದೇವೆ ಎಂದು ಹೇಳಿದ್ದಾರೆ.
ತೀರ್ಥಹಳ್ಳಿ ಕ್ಷೇತ್ರದ ಶಾಸಕರ ಅಸಮರ್ಥ ಆಡಳಿತ, ದುರಾಡಳಿತದ ವಿರುದ್ಧ ಚುನಾವಣೆ ನಡೆಸುತ್ತೇವೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ, ಇದನ್ನು ಬಳಸಿಕೊಳ್ಳುತ್ತೇವೆ. ಕ್ಷೇತ್ರದಲ್ಲಿ ಚುನಾವಣೆಯು ಮಂಜುನಾಥ ಗೌಡರ ನೇತೃತ್ವದಲ್ಲಿ ನಡೆಯಲಿದೆ. ತೀರ್ಥಹಳ್ಳಿಯಲ್ಲಿ ಕೋಮುಗಲಭೆ ನಡೆಸಲು ಹೋಗಿ ಗೃಹ ಸಚಿವರು ವಿಫಲರಾಗಿದ್ದಾರೆ. ಅವರ ಭ್ರಷ್ಟಚಾರ ಕ್ಷೇತ್ರದಲ್ಲಿ ಹರಡಿದೆ. 19 ರಂದು ನಾನು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದರು.
ತೀರ್ಥಹಳ್ಳಿ ಸುತ್ತಮುತ್ತ ಸ್ಯಾಂಟ್ರೋ ರವಿ ರಿಯಲ್ ಎಸ್ಟೇಟ್ ಹಾಗೂ ಮರಳು ದಂಧೆ ನಡೆಸಿದ್ದು, ನನ್ನ ಬಳಿ ದಾಖಲೆ ಇದೆ. ಅಧಿಕಾರಿಗಳು ನಮ್ಮ ಬಳಿ ಬಂದಿದ್ದರು, ಆರಗ ಅವರನ್ನು ಸೋಲಿಸಬೇಕು ಎಂದು ಮಂದಾರ್ತಿಗೆ ಹರಕೆ ಹೊತ್ತಿದ್ದೇವೆ ಎಂದು ತಿಳಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಒಂದು ಲಕ್ಷ ಮತ ಬರಬೇಕು ಎಂದು ನಾವು ಲೆಕ್ಕಾಚಾರ ಮಾಡಿದ್ದೇವೆ. ನನಗಾಗಿ ನಾನು ಮತ ಕೇಳಲ್ಲ. ಪಕ್ಷಕ್ಕಾಗಿ ಮತ ಕೇಳುತ್ತೇನೆ. ನಾನು ಪಕ್ಷಭೇದ ಮರೆತು ಕೆಲಸ ಮಾಡಿದ್ದೇನೆ ಎಂದು ರತ್ನಾಕರ್ ಹೇಳಿದರು.
ಗೃಹ ಸಚಿವರನ್ನು ಅವರ ಗೃಹಕ್ಕೆ ಕಳುಹಿಸುವ ಚುನಾವಣೆ ಇದಾಗಲಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಅವರ ಮನೆಗೆ ಕಳುಹಿಸುವ ಚುನಾವಣೆ ಇದಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಆರ್. ಎಂ. ಮಂಜುನಾಥ ಗೌಡರು ತಿಳಿಸಿದ್ದಾರೆ. ಜನರ ಮುಂದೆ ನಾವಿಬ್ಬರು ಒಟ್ಟಿಗೆ ಹೋಗುತ್ತಿರುವುದು ರಾಜ್ಯಕ್ಕೆ ರಾಷ್ಟ್ರಕ್ಕೆ ತಿರುವು ನೀಡುವ ವಿಚಾರವಾಗಿದೆ. ಇಬ್ಬರು ಒಟ್ಟಾಗಿ ಹೋದರೆ ಗೆಲುವು ಸಾಧ್ಯ ಎಂದು ಜನರ ಅಭಿಪ್ರಾಯವಾಗಿದೆ. ಬಿಜೆಪಿಯ ಸುಳ್ಳಿನ ವ್ಯಾಪಾರವನ್ನು ಕೊನೆಗಾಣಿಸಬೇಕು ಎಂದು ನಮ್ಮ ಹೋರಾಟ ಪ್ರಾರಂಭವಾಗಿದೆ. ಭ್ರಷ್ಟ, ದುಷ್ಟ, ರೈತ ವಿರೋಧಿ ನೀತಿಯನ್ನು ಕೊನೆಗಾಣಿಸಲು ಚುನಾವಣೆ ನಡೆಸಲಿದ್ದೇವೆ ಎಂದರು.
ತೀರ್ಥಹಳ್ಳಿ ಕ್ಷೇತ್ರದ ಸಂಖ್ಯೆ 114, ಇಲ್ಲಿಂದ ಗೆಲುವು ಸಾಧಿಸುತ್ತೇವೆ. ನಾನು ಕಿಮ್ಮನೆ ಅವರನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕರೆದುಕೊಂಡು ಹೋಗುತ್ತೇನೆ. ನಮ್ಮಿಬ್ಬರ ಹೊಂದಾಣಿಕೆಯಿಂದ ಕೇವಲ ನಾವಿಬ್ಬರು ಅಷ್ಟೇ ಅಲ್ಲ ನಮ್ಮ ಕೆಳಹಂತದ ನಾಯಕರು ಸಹ ಒಟ್ಟಾಗಿದ್ದಾರೆ. ನಾವಿಬ್ಬರು ಒಂದಾಗಿದ್ದಕ್ಕೆ ಅನೇಕ ಬಿಜೆಪಿಯ ಯುವಕರು ಸಹ ಕಾಂಗ್ರೆಸ್ಗೆ ಬಂದಿದ್ದಾರೆ ಎಂದು ಮಂಜುನಾಥಗೌಡ ಹೇಳಿದರು.
ಈಶ್ವರಪ್ಪ ಅವರ ಹಾದಿಯನ್ನು ಆರಗ ಜ್ಞಾನೇಂದ್ರ ಹಿಡಿಯುತ್ತಾರೆ ಎಂದು ಇತ್ತು. ಆದರೆ, ಅವರು ಮತ್ತೆ ಸ್ಪರ್ಧೆಗೆ ಬಂದಿದ್ದಾರೆ. ನಾನು ಕಿಮ್ಮನೆ ರತ್ನಾಕರ್ ಅವರನ್ನು ಗೆಲ್ಲಿಸಿಕೊಂಡು ಹೋಗುತ್ತೇನೆ. ಜನರ ಬಯಕೆಯಂತೆ ನಾವು ಒಂದಾಗಿದ್ದೇವೆ. ಸಿಎಂ ತಮ್ಮ ಬೀಗರ ಮನೆಯಲ್ಲಿ ಆರಗ ಜ್ಞಾನೇಂದ್ರ ಪರ ಪ್ರಚಾರ ಮಾಡಿದ್ದಾರೆ. ಸಿಎಂಗೆ ಸುದೀಪ್ ಅವರನ್ನು ಕರೆದುಕೊಂಡು ಹೋಗುವ ಸ್ಥಿತಿ ಇದೆ ಎಂದರು. ಈ ವೇಳೆ, ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ವೀಕ್ಷಕರಾದ ಕಲಗೋಡು ರತ್ನಾಕರ್ ಹಾಜರಿದ್ದರು.
ಇದನ್ನೂ ಓದಿ:ಮೊದಲ ಪಟ್ಟಿಯೇ ಗೆಲುವಿಗೆ ದಿಕ್ಸೂಚಿ, ಇನ್ನೆರಡು ದಿನದಲ್ಲಿ ಎರಡನೇ ಪಟ್ಟಿ ಬಿಡುಗಡೆ : ಸಿಎಂ ಬೊಮ್ಮಾಯಿ