ಕರ್ನಾಟಕ

karnataka

ETV Bharat / state

ಮಲೆನಾಡ ಮೇಲೆ ಮುನಿಸೇಕೆ ಮಳೆರಾಯ?: ಬರಿದಾಗ್ತಿದೆ ಗಾಜನೂರಿನ ತುಂಗಾ ಡ್ಯಾಂ - ತುಂಗಾ ರಾಜ್ಯದ ಅತಿ ಚಿಕ್ಕ ಅಣೆಕಟ್ಟು

ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಯಂತೆ ಮಳೆ ಬಾರದೇ ಇದ್ದುದರಿಂದ ತುಂಗಾ ಡ್ಯಾಂನಲ್ಲಿ ನೀರಿನ ಕೊರತೆ ಉಂಟಾಗಿದೆ. ಜನರನ್ನು ಕುಡಿಯುವ ನೀರಿನ ಬವಣೆ ಕಾಡುತ್ತಿದೆ.

Tunga Dam
ತುಂಗಾ ಡ್ಯಾಂ

By

Published : May 26, 2023, 8:27 AM IST

Updated : May 26, 2023, 8:57 AM IST

ಅಣೆಕಟ್ಟು ಕುರಿತು ಕಾರ್ಯಪಾಲಕ ಅಭಿಯಂತರ ಸಿದ್ದಣ್ಣನವರ ಮಾಹಿತಿ.

ಶಿವಮೊಗ್ಗ: 'ಮಲೆನಾಡ ಹೆಬ್ಬಾಗಿಲು' ಎಂಬ ಪ್ರಸಿದ್ಧಿಯ ಶಿವಮೊಗ್ಗ ಜಿಲ್ಲೆಯ ಮೇಲೆ ವರುಣ ಮುನಿಸಿಕೊಂಡಂತಿದೆ. ವಾಡಿಕೆಯಂತೆ ಮಳೆಯಾಗದೇ ಇದ್ದುದರಿಂದ ಜಿಲ್ಲೆಯ ಜೀವನಾಡಿ ಗಾಜನೂರಿನ ತುಂಗಾ ಅಣೆಕಟ್ಟೆಯೊಡಲು ಬರಿದಾಗುತ್ತಿದೆ. ಮಳೆರಾಯ ಹೀಗೆಯೇ ಜಿಲ್ಲೆಯಲ್ಲಿ 20 ದಿನಗಳಲ್ಲಿ ಬರದೇ ಹೋದರೆ, ಶಿವಮೊಗ್ಗದ ನಾಗರಿಕರಿಗೆ ಕುಡಿಯಲು ನೀರಿನ ಸಮಸ್ಯೆ ಉಂಟಾಗಲಿದೆ. ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದೆ. ಹವಾಮಾನ ಇಲಾಖೆ ಕೂಡ ಜಿಲ್ಲೆಯಲ್ಲಿ ಮಳೆಯಾಗಲಿದೆ ಎಂದೇ ಮುನ್ಸೂಚನೆ ಕೊಡುತ್ತಿದೆ. ಆದರೆ ಮಳೆರಾಯ ಮಾತ್ರ ಜಿಲ್ಲೆಯ ಮೇಲೆ ತನ್ನ ಕೃಪೆ ತೋರಿಲ್ಲ.

ತುಂಗಾ ಅಣೆಕಟ್ಟೆಯಿಂದ ಕುಡಿಯುವ ನೀರು ಪೂರೈಕೆ: ಮಳೆ ಅಭಾವದಿಂದಾಗಿ ಜಿಲ್ಲೆಗೆ ಕುಡಿಯುವ ನೀರನ್ನು ಗಾಜನೂರಿನ ತುಂಗಾ ಅಣೆಕಟ್ಟೆಯಿಂದ ಪೂರೈಕೆ ಮಾಡಲಾಗುತ್ತಿದೆ. ಅಣೆಕಟ್ಟಿಯಿಂದ ನೀರನ್ನು ಸುಮಾರು 12 ಕಿ.ಮೀಟರ್​ ದೂರದಿಂದ ಶಿವಮೊಗ್ಗ ಪಟ್ಟಣದ ಮಂಡ್ಲಿಯ ಕೃಷ್ಣರಾಜೇಂದ್ರ ನೀರು ಶುದ್ಧೀಕರಣ ಘಟಕಕ್ಕೆ ತರಲಾಗುತ್ತದೆ. ಈ ಘಟಕದಲ್ಲಿ ನೀರು ಶುದ್ಧೀಕರಿಸಿದ ನಂತರ ಶಿವಮೊಗ್ಗದ 35 ವಾರ್ಡ್​ಗಳಿಗೆ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

ಇದನ್ನೂ ಓದಿ:ಮನೆಗೆ ಬಾರದ ಗಂಗೆ.. ಹಳ್ಳದ ನೀರನ್ನೇ ಕುಡಿಯುತ್ತಿರುವ ಗ್ರಾಮಸ್ಥರು

ರಾಜ್ಯದ ಅತಿ ಚಿಕ್ಕ ಅಣೆಕಟ್ಟು: ತುಂಗಾ ನದಿಗೆ ಕಟ್ಟಲಾಗಿರುವ ಅಣೆಕಟ್ಟು 2.94 ಅಡಿ ಎತ್ತರವಿದ್ದು ರಾಜ್ಯದ ಅತಿ ಚಿಕ್ಕ ಅಣೆಕಟ್ಟಾಗಿದೆ. ಇದರಲ್ಲಿ 3.54 ಕ್ಯೂಸೆಕ್ ನೀರು ಸಂಗ್ರಹವಾಗುತ್ತದೆ. ಮಳೆಗಾಲದಲ್ಲಿ ನೀರು ಹರಿದು ಬರುವುದರಿಂದ ಅಣೆಕಟ್ಟಿನಲ್ಲಿ ನೀರಿನ ಕೊರತೆ ತೀರಾ ಕಡಿಮೆ. ಆದರೆ ಈ ಬಾರಿ ಇಂಜಿನಿಯರ್​ಗಳು ಕಾಲುವೆಗಳಿಗೆ ಅಣೆಕಟ್ಟೆಯಿಂದ ನೀರು ಹರಿಸಿದ್ದು ನೀರಿನ ಕೊರತೆ ಉಂಟಾಗಿದೆ. ಇದರ ಜೊತೆಗೆ ಅಣೆಕಟ್ಟಿನ ತುಂಬಾ ಹೂಳು ತುಂಬಿದ್ದು ಗಾಜನೂರು ಡ್ಯಾಂನಲ್ಲಿ ನೀರು ಸಂಗ್ರಹ ಕಡಿಮೆಯಾಗಿದೆ.

ಅಣೆಕಟ್ಟೆ ಹಿನ್ನೀರಿನ ಪ್ರದೇಶವಾದ ಮಂಡಗದ್ದೆ ಭಾಗದ ಪ್ರದೇಶದಲ್ಲಂತೂ ನೀರು ಬತ್ತಿ ಹೋಗಿದೆ. ನೀರಿಲ್ಲದೆ ನದಿಪಾತ್ರದ ಅರಣ್ಯದಲ್ಲಿಯೂ ಬರಗಾಲ ಸೃಷ್ಟಿಯಾಗುವಂತಾಗಿದೆ. ಡ್ಯಾಂನಲ್ಲಿ 15 ಅಡಿಗಳಷ್ಟು ನೀರು ಕಡಿಮೆಯಾಗಿದ್ದು, ಶೇ. 10 ರಿಂದ 15 ರಷ್ಟು ನೀರಿನ ಕೊರತೆ ಉಂಟಾಗಿದೆ.

ಮುಂದಿನ ದಿನಗಳಲ್ಲಿ ಮಳೆ ಬಾರದೇ ಇದ್ದರೆ ಜಿಲ್ಲೆಯ ಜನರಿಗೆ ಕುಡಿಯಲೂ ನೀರಿಲ್ಲದೆ ಪರದಾಡಬೇಕಾದ ಪರಿಸ್ಥಿತಿ ತಲೆದೋರಬಹುದು. ಕಳೆದ ನಾಲ್ಕು ವರ್ಷಗಳ ಹಿಂದೆ ಕೂಡ ಇದೇ ರೀತಿ ಪರಿಸ್ಥಿತಿ ಉಂಟಾಗಿತ್ತು. ಆಗ ಮಹಾನಗರ ಪಾಲಿಕೆಯಿಂದ ನೀರು ಸದ್ಬಳಕೆ, ಅನವಶ್ಯಕವಾಗಿ ನೀರು ಪೋಲು ತಡೆ, ಕುಡಿಯುವ ನೀರನ್ನು ಅತಿ ಜಾಗರೂಕತೆಯಾಗಿ ಬಳಕೆ ಮಾಡುವ ವಿಚಾರವನ್ನು ಜನತೆಗೆ ಮನದಟ್ಟು ಮಾಡಲಾಗಿತ್ತು.

ಇದನ್ನೂ ಓದಿ:ಶಿವಮೊಗ್ಗದಲ್ಲಿ 41 ನೇ ರೈತ ಹುತಾತ್ಮ ದಿನಾಚರಣೆ: ರೈತ ವಿರೋಧಿ 3 ಕೃಷಿ ಕಾಯಿದೆ ರದ್ದುಪಡಿಸಲು ರೈತ ಸಂಘದ ಆಗ್ರಹ

Last Updated : May 26, 2023, 8:57 AM IST

ABOUT THE AUTHOR

...view details