ಶಿವಮೊಗ್ಗ:ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಗ್ರಾಮದ ಸಿದ್ದೇಶ್ವರ ಹಾಸ್ಟೆಲ್‌ನಲ್ಲಿ ಮೇಲ್ವಿಚಾರಕಿ ವಿದ್ಯಾರ್ಥಿನಿಯರಿಗೆ ಬೆಡ್ಶೀಟ್ಗಳನ್ನು ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಆನಂದಪುರ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಮಮತಾ ಎಂಬುವರು ಕಳೆದ ವರ್ಷ ಸರ್ಕಾರ ವಿದ್ಯಾರ್ಥಿಗಳಿಗೆ ವಿತರಿಸಲು ಬೆಡ್ಶೀಟ್ಗಳನ್ನು ನೀಡಿತ್ತು.
ಆದರೆ, ವಿದ್ಯಾರ್ಥಿ ನಿಯಲದ ಮೇಲ್ವಿಚಾರಕಿ ದುರುದ್ದೇಶದಿಂದ 30ಕ್ಕೂ ಅಧಿಕ ಬೆಡ್ಶೀಟ್ಗಳನ್ನು ಮುಚ್ಚಿಟ್ಟಿದ್ದಾರೆ. ಈ ಕುರಿತು ಹಾಸ್ಟೆಲ್ ವಿದ್ಯಾರ್ಥಿನಿಯರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಕುಮಾರಿ ಹಾಗೂ ಸಾಗರ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆಯವರ ಬಳಿ ದೂರು ನೀಡಿದ್ದರು.
ಆದಂದಪುರದ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ನೀಡಬೇಕಾದ ಬೆಡ್ಶೀಟ್ ಬಚ್ಚಿಟ್ಟ ವಾರ್ಡನ್ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಸ್ಟೆಲ್ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ವಿದ್ಯಾರ್ಥಿಗಳು ಮೇಲ್ವಿಚಾರಕಿ ಮೇಲೆ ಆರೋಪಗಳ ಸುರಿಮಳೆ ಸುರಿದರು. ಚಳಿಗಾಲದಲ್ಲಿ ಬೆಡ್ಶೀಟ್ ನೀಡುವಂತೆ ಬೇಡಿಕೊಂಡರೂ ಸಹ ನೀಡಲಿಲ್ಲ.
52ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರತಿದಿನ ಟೀ ಮಾಡಲು ಕೇವಲ 1 ಲೀಟರ್ ಹಾಲನ್ನು ತರಿಸುತ್ತಿದ್ದಾರೆ. ಕೇವಲ 1 ಕೆಜಿ ಚಿಕನ್ ತರಿಸಿ ಉಣಬಡಿಸುತ್ತಿದ್ದಾರೆ. ಸಸ್ಯಹಾರಿ ವಿದ್ಯಾರ್ಥಿಗಳಿಗೆ ಅದು ಕೂಡ ಇಲ್ಲ. ನಮ್ಮ ಹಾಸ್ಟೆಲ್‌ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ ಎಂದು ದೂರಿದರು.
ಈ ಬಗ್ಗೆ ಹಾಸ್ಟೆಲ್ ಮೇಲ್ವಿಚಾರಕಿಯನ್ನು ವಿಚಾರಿಸಿದಾಗ ಅವರು ಹಾರಿಕೆಯ ಉತ್ತರ ನೀಡಿದ್ದಾರೆ. ಬಳಿಕ ಮಲ್ಲಿಕಾರ್ಜುನ್ ಹಕ್ರೆ ಸಮ್ಮುಖದಲ್ಲಿ ಮುಚ್ಚಿಟ್ಟಿದ್ದ ಬೆಡ್ಶೀಟ್ಗಳನ್ನು ಹಂಚಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಮಾತ್ರ ಒಕ್ಕೊರಲಿನಿಂದ ವಾರ್ಡನ್ ಬದಲಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಸಚಿವ ಕೆ.ಎಸ್.ಈಶ್ವರಪ್ಪ ಭಾವಚಿತ್ರಕ್ಕೆ ಹಾಲಿನ ಅಭಿಷೇಕ