ಶಿವಮೊಗ್ಗ :ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾನ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. 80 ವರ್ಷ ಮೇಲ್ಪಟ್ಟವರಿಗೆ ಹಾಗೂ ಅಂಗವಿಕಲರಿಗೆ ಚುನಾವಣಾ ಆಯೋಗವು ಈ ಬಾರಿ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶ ನೀಡಿದೆ. ಈ ಮೂಲಕ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶವನ್ನು ಆಯೋಗ ಹೊಂದಿದೆ. ಇದಕ್ಕಾಗಿ ಚುನಾವಣಾ ಆಯೋಗವು ತಮ್ಮ ಅಧಿಕಾರಿಗಳನ್ನು 80 ವರ್ಷ ಮೇಲ್ಟಟ್ಟ ಮತದಾರರ ಮನೆಗೆ ಕಳುಹಿಸುತ್ತಿದೆ. ಹೀಗೆ ಮತದಾರರ ಮನೆಗಳಿಗೆ ಹೋದ ಅಧಿಕಾರಿಗಳು ಮತದಾನ ಮಾಡಿಸಿಕೊಂಡು ಬರುತ್ತಿದ್ದಾರೆ.
ಮನೆಯಲ್ಲಿಯೇ ಮತಗಟ್ಟೆ ಸ್ಥಾಪಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಒಂದನೇ ಮತಗಟ್ಟೆ ಅಧಿಕಾರಿ, ಎರಡನೇ ಮತಗಟ್ಟೆ ಅಧಿಕಾರಿ, ಒಬ್ಬರು ಮೈಕ್ರೋ ಅಬ್ಸರ್ವರ್, ಒಬ್ಬರು ಕ್ಯಾಮರಾಮನ್ ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸ್ಥಳೀಯವಾಗಿ ಬಿಎಲ್ ಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಸಹಕಾರ ಮಾಡಲಿದ್ದಾರೆ.
ಇನ್ನು, ಮನೆಯಿಂದಲೇ ಜಿಲ್ಲೆಯ ಸೊರಬ ಪಟ್ಟಣದ ಚಿಕ್ಕಪೇಟೆ ನಿವಾಸಿ ಕೃಷ್ಣಭಟ್ ಗೋಖಲೆ ಮೊದಲು ಮತ ಚಲಾಯಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟವರು ಒಟ್ಟು 28,680 ಮತದಾರರು ಇದ್ದಾರೆ. ಇಂದಿನಿಂದ ಮತದಾನ ನಡೆಯುವ ತನಕ ಹಿರಿಯರ ಮತದಾನ ನಡೆಯಲಿದೆ.