ಶಿವಮೊಗ್ಗ: ಕಳೆದ 5 ತಿಂಗಳ ಕಾಲ ಸ್ಥಗಿತವಾಗಿದ್ದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್ಎಲ್) ಕಾರ್ಖಾನೆ ಆಗಸ್ಟ್ 10 ರಿಂದ ಮತ್ತೆ ಕಾರ್ಯಾರಂಭಿಸಲಿದೆ. ಕೇಂದ್ರ ಸರ್ಕಾರ ನೀತಿ ಆಯೋಗದ ಶಿಫಾರಸಿನಂತೆ ಸೇಲ್ನ ಮೂರು ಕಾರ್ಖಾನೆಗಳಾದ ಭದ್ರಾವತಿಯ ವಿಐಎಸ್ಎಲ್, ತಮಿಳುನಾಡಿನ ಸೇಲಂ ಕಾರ್ಖಾನೆ ಹಾಗೂ ದುರ್ಗಾಪುರನ ಕಾರ್ಖಾನೆಯನ್ನು ಮುಚ್ಚಲು ಸೂಚಿಸುತ್ತು. ಕಳೆದ ಫೆಬ್ರವರಿಯಲ್ಲಿ ಕಾರ್ಖಾನೆಗಳು ಉತ್ಪಾದನೆ ನಿಲ್ಲಿಸಿದ್ದವು. ಸದ್ಯ ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಪುನಾರಂಭ ಮಾಡಲು ಸೂಚಿಸಿದೆ.
ಈ ಕುರಿತು ಕಾರ್ಮಿಕ ಸಂಘದ ಅಧ್ಯಕ್ಷರಾದ ಜಗದೀಶ್ ಮಾಧ್ಯಮದ ಜೊತೆ ಮಾತನಾಡಿ, ಕಾರ್ಖಾನೆ ಪುನರಾಂಭವಾಗುತ್ತಿರುವುದು ಒಂದು ಶುಭ ಸೂಚನೆಯಾಗಿದೆ. ಆದರೆ, ಇದರಿಂದ ನಮಗೆ ತೃಪ್ತಿ ಇಲ್ಲ. 2016ರಲ್ಲಿ ಕಾರ್ಖಾನೆಯನ್ನು ಖಾಸಗಿಕರಣ ಮಾಡಬೇಕು ಎಂದು ಆದೇಶ ಬಂದಾಗ ಕಾರ್ಮಿಕ ಸಂಘಟನೆಯು ಸುಮಾರು 73 ದಿನಗಳ ಹೋರಾಟ ನಡೆಸಿತ್ತು.
ಅಂದು ನಮ್ಮ ಹೋರಾಟ ನಡೆಯುತ್ತಿದ್ದರೂ ಸಹ ಕಾರ್ಖಾನೆಯು ಮುಚ್ಚುವ ಹಂತಕ್ಕೆ ತಲುಪಿತ್ತು. ನಂತರ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಖಾನೆ ಅಭಿವೃದ್ದಿ ಪಡಿಸಬೇಕೆಂದು ಹೇಳಿದಾಗಲೂ ಸಹ ನಾವು ವಿರೋಧ ವ್ಯಕ್ತಪಡಿಸಿ ಹೋರಾಟ ನಡೆಸಿದ್ದೆವು. ಕಾರ್ಖಾನೆಯಲ್ಲಿ ಉತ್ಪಾದನೆ ಮಾಡಲು ನೂತನ ಯಂತ್ರೋಪಕರಣಗಳು ಇಲ್ಲದ ಕಾರಣ ಕಾರ್ಖಾನೆ ಖರೀದಿ ಮಾಡಲು ಯಾರೂ ಮುಂದೆ ಬರಲಿಲ್ಲ. ಇದರಿಂದ ಖಾಸಗೀಕರಣ ಪ್ರಕ್ರಿಯೆ ಸಂಪೂರ್ಣ ನಿಂತು ಹೋಯಿತು. ಇದರಿಂದ ಕಾರ್ಖಾನೆ ಮುಚ್ಚುವ ಹಂತ ತಲುಪಿತ್ತು.
ನಂತರ ಕಾರ್ಖಾನೆಯನ್ನು ಉಳಿಸಲು ಸರ್ಕಾರದ ಜೊತೆ ಸೇತುವೆಯಾಗಿ ಇದ್ದವರು ಸಂಸದ ಬಿ ವೈ ರಾಘವೇಂದ್ರ. ನಮ್ಮ ಹೋರಾಟಕ್ಕೆ ರಾಘವೇಂದ್ರ ಅವರು ಸ್ಪಂದಿಸಿ, ಕಾಲಕಾಲಕ್ಕೆ ನಮ್ಮ ಅಂಕಿ - ಅಂಶಗಳನ್ನು ಪಡೆದುಕೊಂಡರು. ನಂತರ ಪಾಲಿಸಿ ವಿಷಯಗಳಲ್ಲಿ ಏನೆಲ್ಲಾ ಬೆಳವಣಿಗೆ ಆಗಿದೆ ಎಂಬುದನ್ನು ತಿಳಿದು ಕೇಂದ್ರದ ಸಚಿವರುಗಳ ಜೊತೆ ಮಾತನಾಡಿ, ಕಾರ್ಖಾನೆಯನ್ನು ಪುನಾರಂಭ ಮಾಡಲು ಅವರು ಯಶಸ್ವಿಯಾಗಿದ್ದಾರೆ.