ಶಿವಮೊಗ್ಗ : ಭದ್ರಾವತಿಯ ವಿಶ್ವಶ್ವೇರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ(ವಿಐಎಸ್ಎಲ್) ಯನ್ನು ಆಗಸ್ಟ್ 10 ರಿಂದ ಪುನರಾರಂಭವಾಗಲಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ವಿಐಎಸ್ಎಲ್ ಕಾರ್ಖಾನೆಯೇ ಚುನಾವಣಾ ವಿಷಯವಾಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಕಾರ್ಮಿಕರು ಹೋರಾಟ ನಡೆಸುತ್ತಿರುವ ಜಾಗಕ್ಕೆ ಬಂದು ಕಾರ್ಖಾನೆ ಉಳಿಸುವುದಾಗಿ ಭರವಸೆ ನೀಡಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಉಕ್ಕು ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಸ್ಪಷ್ಟ ನಿರ್ದೇಶನದೊಂದಿಗೆ, ಎಸ್ಎಐಎಲ್ ಆಡಳಿತ ಮಂಡಳಿಯು ವಿಐಎಸ್ಎಲ್ ನಲ್ಲಿ ಉತ್ಪಾದನಾ ಚಟುವಟಿಕೆಗಳನ್ನು ಪುನಾರಂಭಿಸಲು ಅಂತಿಮವಾಗಿ ಒಪ್ಪಿಕೊಂಡಿರುವುದನ್ನು ತಿಳಿಸಲು ನನಗೆ ಅತ್ಯಂತ ಸಂತೋಷವಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಕಾರ್ಖಾನೆಯ ಬಾರ್‌ಮಿಲ್ ಕಾರ್ಯಾಚರಣೆಗಳು ಆಗಸ್ಟ್ 10 ರಿಂದ ಪ್ರಾರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ಪ್ರಾಥಮಿಕ ಗಿರಣಿ ಪುನಾರಂಭವಾಗಲಿದೆ. ವಿಐಎಸ್ಎಲ್ ಅನ್ನು ನಂಬಿಕೊಂಡಿರುವ ಉದ್ಯೋಗಿಗಳ ಸಮುದಾಯಕ್ಕೆ ಮತ್ತು ಭದ್ರಾವತಿಯ ಜನ ಸಾಮಾನ್ಯರಿಗೆ ಈ ಒಂದು ನಿರ್ಧಾರ ಮಹತ್ವದ ಕ್ಷಣವಾಗಿದೆ ಎಂಬುದಾಗಿ ಭಾವಿಸಿದ್ದೇನೆ. ಕೇಂದ್ರ ಸರ್ಕಾರದ ಸಂಬಂಧಿಸಿದ ಮಂತ್ರಿಗಳೊಂದಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ನಡೆಸಲಾದ ನಿರಂತರ ಪ್ರಯತ್ನದ ಫಲವಾಗಿ ಇಂತಹ ಒಂದು ಮಹತ್ತರವಾದ ನಿರ್ಣಯವನ್ನು ಎಸ್ಎಐಎಲ್ ಕೈಗೊಳ್ಳಲು ಸಹಕಾರವಾಗಿದೆ. ಈ ಮಹತ್ವದ ಮೈಲಿಗಲ್ಲನ್ನು ಪಡೆಯಲು ದಣಿವರಿಯಿಲ್ಲದೆ ಕೆಲಸ ಮಾಡಿದ್ದೇವೆ ಎಂದಿದ್ದಾರೆ.