ಶಿವಮೊಗ್ಗ:100 ನೇ ವರ್ಷದ ಹೂಸ್ತಿಲಲ್ಲಿ ಇರುವ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆಯ ಸವಿನೆನಪಿಗಾಗಿ ಇಂದು (ನ. 4 ಮತ್ತು 5) ಎರಡು ದಿನ ಶತಮಾನೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯ ಮೈದಾನದಲ್ಲಿ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದ್ದು, ನವೆಂಬರ್ 4 ರಂದು ಬೆಳಗ್ಗೆ ನಡೆಯುವ ಕಾರ್ಯಕ್ರಮವನ್ನು ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಹದ್ದೂರ್ ಅವರು ಉದ್ಘಾಟಿಸುವರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಆದಿಚುಂಚನಗಿರಿ ಮಠದ ಡಾ ನಿರ್ಮಲಾನಂದ ಸ್ವಾಮೀಜಿ ಹಾಗೂ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ವಹಿಸಲಿದ್ದಾರೆ. ಕೇಂದ್ರದ ವಿವಿಧ ಸಚಿವರು ಭಾಗವಹಿಸಲಿದ್ದಾರೆ. ನಂತರ ನಾರಾಯಣ ಹೃದಯಾಲಯದ ನಿರ್ದೇಶಕ ಡಾ ಸಿ ಎನ್ ಮಂಜುನಾಥ್, ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ ಹಾಗೂ ವಿಆರ್ಎಲ್ ಸಂಸ್ಥೆ ಮುಖ್ಯಸ್ಥ ವಿಜಯ್ ಸಂಕೇಶ್ವರ್ ಅವರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
ನಾಳೆ ನಡೆಯುವ ಮಧ್ಯಾಹ್ನದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಮಂತ್ರಿಮಂಡಲದ ವಿವಿಧ ಸಚಿವರು ಭಾಗವಹಿಸಲಿದ್ದಾರೆ. ಭಾನುವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇಂದು ಸಂಜೆ ವಿಐಎಸ್ಎಲ್ನ ಶತಮಾನೋತ್ಸವ ಅಂಗವಾಗಿ ಭದ್ರಾ ನದಿಯ ಸಂಗಮೇಶ್ವರ ಮಂಟಪದಲ್ಲಿ ಭದ್ರಾರತಿ ಕಾರ್ಯಕ್ರಮ ಜರುಗಲಿದೆ.