ಶಿವಮೊಗ್ಗ:ಶಿವಮೊಗ್ಗದಲ್ಲಿ ಪದೇ ಪದೆ ಗಲಾಟೆಗಳು ನಡೆಯುತ್ತಿದೆ. ಗಲಾಟೆ ನಡೆಯುವ ತಾಯಿ ಬೇರು ಹುಡುಕುವ ಅವಶ್ಯಕತೆ ಇದೆ ಎಂದು ಅವಧೂತರಾದ ವಿನಯ್ ಗುರೂಜಿ ಹೇಳಿದ್ದಾರೆ. ಈ ಬಗ್ಗೆ ರಾಜಕೀಯ ವ್ಯಕ್ತಿಗಳು ಕೂಡ ವಿಮರ್ಶೆ ಮಾಡಿಕೊಳ್ಳಬೇಕು ಎಂದಿದ್ದಾರೆ.
ಶಿವಮೊಗ್ಗ ರಾಗಿಗುಡ್ಡ ಗಲಾಟೆಗೆ ಸಂಬಂಧಿಸಿದಂತೆ ನಗರದ ಗಾಂಧಿ ಪಾರ್ಕ್ನಲ್ಲಿ ಸರ್ವ ಧರ್ಮ ಗುರುಗಳ ಸಭೆ ನಡೆಸಲಾಯಿತು. ಈ ವೇಳೆ ಗಾಂಧೀಜಿ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ ವಿನಯ್ ಗುರೂಜಿ ಸೋಮವಾರ ಮಾತನಾಡಿದರು. ಶಿವಮೊಗ್ಗದಲ್ಲಿ ಘರ್ಷಣೆಗಳು ನಡೆಯುತ್ತಿದೆ. ಈ ಎಲ್ಲ ಗದ್ದಲಗಳಲ್ಲಿ 15 ರಿಂದ 30 ವರ್ಷದ ಯುವಕರಷ್ಟೇ ಕಾಣುತ್ತಿದ್ದಾರೆ. ಇದರಲ್ಲಿ ಯಾರು ಕೂಡ ಶ್ರೀಮಂತರ ಮಕ್ಕಳು ಕಾಣುತ್ತಿಲ್ಲ ಎಂದರು.
ಶಿವಮೊಗ್ಗದಲ್ಲಿ ಯಾವುದೋ ಒಂದು ಗುಂಪು ನಿಂತು ಆಟವಾಡುತ್ತಿದೆ. ಇದನ್ನು ಶಿವಮೊಗ್ಗದ ಜನರು ಅರಿಯಬೇಕಿದೆ. ತಂದೆ, ತಾಯಿಗಳು ತಮ್ಮ ಮಕ್ಕಳಿಗೆ ತಿದ್ದುವ ಕೆಲಸವಾಗಬೇಕಿದೆ. ಧರ್ಮಗುರುಗಳು, ಸ್ವಾಮೀಜಿಗಳು ಎಷ್ಟು ಹೇಳಲು ಸಾಧ್ಯ. ಕಾನೂನು ಕಠಿಣಗೊಳಿಸುವ ಅಗತ್ಯವಿದ್ದು, ಮುಲಾಜಿಲ್ಲದೇ, ಕೊರೊನಾ ಬಂದಾಗ ದೂರವಿಟ್ಟ ಹಾಗೆ ಮಕ್ಕಳನ್ನು ಸರಿ ದಾರಿಗೆ ತರಲು ದೂರವಿಟ್ಟು ಸರಿದಾರಿಗೆ ತರಬೇಕಿದೆ ಎಂದು ಹೇಳಿದ್ದಾರೆ. ಯುವಕರು ಹಿರಿಯರು ಹೇಳಿದ್ದನ್ನು ಕೇಳಬೇಕು ಎಂದು ವಿನಯ್ ಗುರೂಜಿ ಸಲಹೆ ನೀಡಿದರು.
ಈ ವೇಳೆ ಬಸವಕೇಂದ್ರದ ಸ್ವಾಮೀಜಿ, ಫಾದರ್ ಪಿಂಟೂ ಸೇರಿದಂತೆ ವಕೀಲ ಶ್ರೀಪಾಲ್, ಕಿರಣ್, ಗುರುಮೂರ್ತಿ ಸೇರಿದಂತೆ ಇತರರಿದ್ದರು.