ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದರು ಶಿವಮೊಗ್ಗ:''ಪಿಎಸ್ಐ ಹಾಗೂ ಕೋವಿಡ್ ಹಗರಣದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು'' ಎಂದು ಸಾಗರ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಆಗ್ರಹಿಸಿದರು.
ನಗರದಲ್ಲಿಂದು ಇಂದು (ಗುರುವಾರ) ಮಾತನಾಡಿದ ಅವರು, ''ವಿಜಯೇಂದ್ರ ಅವರು ತಂದೆ ಹೆಸರಿನಲ್ಲಿ ರಾಜ್ಯಾಧ್ಯಕ್ಷರಾಗಿದ್ದಾರೆ. ಅವರು ಲೋಕಸಭೆಯ ಎಲ್ಲಾ ಸ್ಥಾನವನ್ನು ಗೆಲ್ಲುತ್ತೇವೆ ಎನ್ನುತ್ತಾರೆ. ಇದನ್ನು ಸುವರ್ಣಾಕ್ಷರದಲ್ಲಿ ಬರೆದಿಡಬೇಕು ಎನ್ನುತ್ತಿದ್ದಾರೆ. ಈಗ ಒಂದೇ ಒಂದು ಸೀಟು ಕಡಿಮೆ ಆದರೂ ವಿಜಯೇಂದ್ರ ರಾಜೀನಾಮೆ ಕೊಟ್ಟು ಹೋಗುತ್ತಾರಾ'' ಎಂದು ಪ್ರಶ್ನಿಸಿದರು.
''ನೀವು ಬಿ ಕೆ ಹರಿಪ್ರಸಾದ್ಗೆ ಮಂಪರು ಪರೀಕ್ಷೆ ಒಳಪಡಿಸಬೇಕು ಎನ್ನುತ್ತಿರಾ. ಹಾಗಾದ್ರೆ, ಪಿಎಸ್ಐ ಹಾಗೂ ಕೋವಿಡ್ ಹಗರಣದ ಕುರಿತು ನಿಮ್ಮನ್ನು ಮಂಪರು ಪರೀಕ್ಷೆ ಒಳಪಡಿಸಬೇಕಿದೆ ಎಂದರು. ''ಆರ್. ಅಶೋಕ್ ನೀವು ಬರ ಪರಿಹಾರದ ಹಣ ನೀಡಿಲ್ಲ ಎಂದು ಆರೋಪ ಮಾಡುವ ಬದಲು ಕೇಂದ್ರದಿಂದ ಹಣ ತನ್ನಿ. ನಿಮ್ಮ ಅಧಿಕಾರ ಅವಧಿಯಲ್ಲಿ ಪ್ರವಾಹ ಬಂದಾಗ ಪರಿಹಾರ ನೀಡಲಿಲ್ಲ. ಸುಮ್ಮನೆ ನಮ್ಮ ಮೇಲೆ ಚಾಟಿ ಬೀಸಬೇಡಿ ಎಂದು ತಿರುಗೇಟು ನೀಡಿದರು.
''ಈಶ್ವರಪ್ಪ ಪ್ರತಿನಿತ್ಯ ಮನಸ್ಸಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ನೀವು(ಬಿಜೆಪಿ) ಮೂರು ಡಿಸಿಎಂ ಮಾಡಿದ್ರಿ, ನಾವು ಮಾಡುವುದು ಬೇಡವೇ? ಈಶ್ವರಪ್ಪ ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ಟಿಕೆಟ್ ಸಿಗದೇ ಹೋದ್ರೆ ನೀವು ನಾಳೆ ಆಕ್ರೋಶಗೊಳ್ಳುತ್ತೀರಿ, ನೀವು ಸೆಕೆಂಡ್ ಯತ್ನಾಳ್ ಆಗುತ್ತಿರಿ'' ಎಂದು ಬೇಳೂರು ಭವಿಷ್ಯ ನುಡಿದರು.
ಈಗ ಮೋದಿಯವರು ಗ್ಯಾರಂಟಿ ಎನ್ನುತ್ತಿದ್ದಾರೆ:ಬಿಜೆಪಿಯವರು ನಮ್ಮ ಗ್ಯಾರಂಟಿ ಬಗ್ಗೆ ಟೀಕಿಸಿದ್ದರು. ಪ್ರಸ್ತುತ ಮೋದಿಯವರೇ ಗ್ಯಾರಂಟಿ ಎಂದು ಜನರ ಬಳಿಗೆ ಬರುತ್ತಿದ್ದಾರೆ. ನಮ್ಮ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದ ಅವರು, ಬಿಲ್ಕಿಸ್ ಬಾನೊ ಪ್ರಕರಣದಲ್ಲಿ ನ್ಯಾಯಾಲಯ ಉತ್ತಮ ತೀರ್ಪು ನೀಡಿದೆ. ಆಕೆಗೆ ನ್ಯಾಯಾ ಸಿಕ್ಕಿದೆ. ಅತ್ಯಾಚಾರಿಗಳಿಗೆ ಜಾಮೀನು ಸಿಗುವಂತೆ ಮಾಡಿದ್ದ ಗುಜರಾತ್ ಸರ್ಕಾರಕ್ಕೆ ನಾಚಿಕೆ ಆಗಬೇಕು'' ಎಂದು ಗರಂ ಆದರು.
ರಾಮಮಂದಿರದಲ್ಲಿ ಬಿಜೆಪಿ ರಾಜಕೀಯ ಸಲ್ಲ:ರಾಮಮಂದಿರದ ಕುರಿತು ರಾಜಕೀಯ ಮಾಡಬೇಡಿ ಎಂದು ಬಿಜೆಪಿಗೆ ಹೇಳಿದ ಬೇಳೂರು, ಯಾವುದೇ ದೇವಾಲಯ ಕಟ್ಟಿದರು ಸಹ ನಾವು ಸಹಾಯ ಮಾಡಿದ್ದೇವೆ ಎಂದರು. ಮೂವರು ಡಿಸಿಎಂ ಹುದ್ದೆ ಸೃಷ್ಟಿ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಸಮಗ್ರವಾಗಿ ಉತ್ತರ ನೀಡಿದ್ದಾರೆ. ಮೂರು ಡಿಸಿಎಂ ಕುರಿತು ಹೈಕಮಾಂಡ್ಗೆ ಕೇಳಬೇಕು ಎಂದರು.
ಕಾಂಗ್ರೆಸ್ ನುಡಿದಂತೆ ನಡೆದಿದೆ:ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯ ಐದನೇ ಗ್ಯಾರಂಟಿ ಯುವನಿಧಿ ಯೋಜನೆಗೆ ನಾಳೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿಲಿದ್ದಾರೆ. ಡಿಸಿಎಂ ಸೇರಿದಂತೆ ಅನೇಕ ಸಚಿವರು ಭಾಗಿಯಾಗಲಿದ್ದಾರೆ. 2.50 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ನಮ್ಮದು ಜನಪರ ಸರ್ಕಾರವಾಗಿದ್ದು, ಇಷ್ಟು ಬೇಗ ಯಾವ ಸರ್ಕಾರಗಳು ಗ್ಯಾರಂಟಿಯನ್ನು ಪೂರೈಸಿಲ್ಲ. ಇದು ದಾಖಲೆಯಾಗಿದೆ. ಯಡಿಯೂರಪ್ಪನವರು ಭಾಗ್ಯಲಕ್ಷ್ಮಿ ಯೋಜನೆ ಕೊಟ್ಟಿದ್ದನ್ನೇ ಬಿಜೆಪಿಯವರು ಹೇಳುತ್ತಿದ್ದಾರೆ. ಈಗ ನಮ್ಮ ಸರ್ಕಾರ ಎಲ್ಲಾ ಗ್ಯಾರಂಟಿಯನ್ನು ನೀಡುತ್ತಿದೆ. ಜನ ಸಾಮಾನ್ಯರಿಗೆ ಸರ್ಕಾರದ ಯೋಜನೆ ತಲುಪಿಸಲಾಗುತ್ತಿದೆ. ಯುವನಿಧಿ ಯೋಜನೆಯಡಿ ಈವರೆಗೆ 70 ಸಾವಿರ ಯುವಕರು ನೋಂದಣಿ ಆಗಿದ್ದಾರೆ. ಸಮಾಜದ ಎಲ್ಲಾ ಜನರಿಗೂ ಸರ್ಕಾರದ ಯೋಜನೆ ತಲುಪಿಸುವ ಗುರಿಯನ್ನು ಸರ್ಕಾರ ಹೊಂದಿದೆ'' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಶ್ರೀರಾಮನ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡಲು ಹೊರಟಿದೆ: ಸಿಎಂ ಸಿದ್ದರಾಮಯ್ಯ