ಶಿವಮೊಗ್ಗ: "ಬೆಂಗಳೂರು ಮತ್ತು ದೆಹಲಿ ಖಜಾನೆಯು ಸಮಾಜದಲ್ಲಿ ಸಮಾನವಾಗಿ ಹಂಚಿಕೆ ಆಗಬೇಕೆಂಬುದು ನಮ್ಮ ಚಳುವಳಿಯ ಉದ್ದೇಶ" ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ. ಶಿವಮೊಗ್ಗದ ಖಾಸಗಿ ಹೋಟೇಲ್ನಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಜಾತಿಗಣತಿ ಆಗಬೇಕೆಂದು ತೀರ್ಮಾನ ಮಾಡಿದ್ದಾರೆ. ಅದರಂತೆ ಹಿಂದೆ ರಾಜ್ಯದಲ್ಲಿ ನಡೆದಿದ್ದ ಜನಗಣತಿ ವರದಿ ಬಹಿರಂಗಪಡಿಸಬೇಕೆಂದು ಮನವಿ ಮಾಡಿದ್ದೇವೆ" ಎಂದರು.
"ಪ್ರವರ್ಗ -1ರಲ್ಲಿ 101 ಜಾತಿಗಳಿವೆ. ಇದರಲ್ಲಿ ಕೇವಲ ಎರಡು ಮೂರು ಸಮಾಜಗಳು ಮಾತ್ರ ಅಭಿವೃದ್ಧಿಯಾಗಿವೆ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಿಲ್ಲ. ಕೆಲವೊಂದು ಜಾತಿಯವರಿಗೆ ರಾಜಕೀಯ ಪ್ರಜ್ಞೆ ಇನ್ನೂ ಬಂದಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಹಿಂದುಳಿದ ಹಾಗೂ ಅತಿ ಹಿಂದುಳಿದ ಜಾತಿಗಳಲ್ಲಿ ಜಾಗೃತಿ ಮೂಡಿಸಲು ಶಿವಮೊಗ್ಗಕ್ಕೆ ಬಂದಿದ್ದೇನೆ. ಹಿಂದುಳಿದ ವರ್ಗದಲ್ಲಿ 197 ಜಾತಿಗಳಿವೆ. ಕೆಲವು ಜಾತಿಗಳು ರಾಜಕೀಯ ಶಕ್ತಿ ದೊರೆತಾಗ ಮೇಲೆ ಬಂದಿವೆ" ಎಂದು ಹೇಳಿದರು.
"ಈ ಚಳುವಳಿಯ ಉದ್ದೇಶ ಯಾರನ್ನೂ ಮಂತ್ರಿ, ಶಾಸಕರನ್ನಾಗಿಸುವುದಲ್ಲ. ದೆಹಲಿ, ಬೆಂಗಳೂರು ಖಜಾನೆ ಪೋಲಾಗದೇ ಸಮಾನವಾಗಿ ಹಂಚಿಕೆ ಆಗಬೇಕಿದೆ. ದೇಶದಲ್ಲಿ ತೆರಿಗೆ ಕಟ್ಟುವವರು ಶೇ.6 ರಷ್ಟು ಮಂದಿ ಮಾತ್ರ. ಈಗ ಜಿಎಸ್ಟಿ ಬಂದ ಮೇಲೆ ಭಿಕ್ಷಕನೂ ಸಹ ತೆರಿಗೆ ಕಟ್ಟುತ್ತಾನೆ. ಸಮಾಜದ ಎಲ್ಲಾ ವರ್ಗದವರ ಶೇ.58 ರಷ್ಟು ಜನ ಸೇರಿ ಶೇ.64ರಷ್ಟು ತೆರಿಗೆ ಕಟ್ಟುತ್ತಿದ್ದಾರೆ" ಎಂದು ತಿಳಿಸಿದರು.
"ಎಲ್ಲರೂ ಶಾಸಕ, ಸಂಸದರಾಗಲು ಆಗಲ್ಲ. ಎಲ್ಲರಿಗೂ ರಾಜಕೀಯ ಶಕ್ತಿ ಸಿಗೋದಿಲ್ಲ. ಕನಿಷ್ಟ ಮೂಲಭೂತ ಸೌಕರ್ಯಗಳಾದ ಶಿಕ್ಷಣ, ಆರೋಗ್ಯ, ಗೌರವಯುತ ಉದ್ಯೋಗ ಸಿಗಬೇಕಾದರೆ, ಖಜಾನೆಯ ಸಮಾನತೆ ಹಂಚಿಕೆ ಆಗಬೇಕು. ಇದಕ್ಕಾಗಿ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಜನಗಣತಿ ಆಗಬೇಕಿದೆ. ವಂಚಿತ ಸಮಾಜಕ್ಕೆ ಶಿಕ್ಷಣ, ಗೌರವ ಸಿಗಬೇಕಾದರೆ ಜಾತಿಗಣತಿ ನಡೆಸಬೇಕು. ಬಹುಸಂಖ್ಯಾತರಾದವರು ಇಂದು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. (ದಲಿತರು, ಆದಿವಾಸಿಗಳು) ಇದರಿಂದ ಇವರಿಗೆ ಬಜೆಟ್‌ನಲ್ಲಿ ಹಣ ಮೀಸಲಿಡಬೇಕಿದೆ" ಎಂದರು.