ಶಿವಮೊಗ್ಗ :ಯೋಗ್ಯ ನಾಯಕನನ್ನು ಹುಡುಕುವ ಯೋಗ್ಯತೆ ಇಲ್ಲದೇ ಇರುವ ಕಾಂಗ್ರೆಸ್ ಪಕ್ಷ ಮೋದಿಯವರನ್ನು ಮಣಿಸುವ ಕುರಿತು ಮಾತನಾಡುತ್ತಿದೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ವ್ಯಂಗ್ಯವಾಡಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ಕಾರ್ಯಕಾರಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ತನ್ನ ಪಕ್ಷಕ್ಕೆ ಯೋಗ್ಯ ನಾಯಕನನ್ನು ಹುಡುಕುವ ಯೋಗತ್ಯೆ ಇಲ್ಲದೇ ಇರುವಾಗ ಮೋದಿಯವರನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಣಿಸುವ ಕುರಿತು ಮಾತನಾಡುವ ಮೂಲಕ ಅಧಿಕಾರಕ್ಕೆ ಬರುತ್ತೇವೆ ಎನ್ನುವ ತಿರುಕನ ಕನಸು ಕಾಣುತ್ತಿದೆ. ಇದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.
ಮೋದಿಗೆ ಜಗತ್ತು ಕೆಚ್ಚೆದೆಯ ನಾಯಕನಾಗಿ ನೋಡುತ್ತಿದೆ :ಇಡೀ ದೇಶ ಇಂದು ಮೋದಿಯವರನ್ನು ಸಂತನ ರೂಪದಲ್ಲಿ ನೋಡುತ್ತಿದ್ದರೆ, ಜಗತ್ತಿನ ರಾಷ್ಟ್ರಗಳು ಕೆಚ್ಚೆದೆಯ ನಾಯಕನಾಗಿ ನೋಡುತ್ತಿದೆ. ಇದು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಿಗೆ ಹಾಗೂ ದೇಶದ ಜನರಿಗೆ ಸ್ವಾಭಿಮಾನ ತರುವ ವಿಚಾರ ಎಂದರು.