ಶಿವಮೊಗ್ಗ: ರಾಜ್ಯ ಚಲನಚಿತ್ರ ಅಕಾಡೆಮಿ ವತಿಯಿಂದ ರಾಜ್ಯದಾದ್ಯಂತ ವಿವಿಧ ಯೋಜನೆ, ಕಾರ್ಯಕ್ರಮ ನಡೆಸುವ ಚಿಂತನೆ ಇದೆ ಎಂದು ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಹೇಳಿದರು.
ಫೆ. 24 ರಿಂದ ಮಾ. 4ರವರೆಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಸುನಿಲ್ ಪುರಾಣಿಕ್ - ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್
ಸಾಕಷ್ಟು ಹಳೆಯ ಕನ್ನಡ ಚಲನಚಿತ್ರಗಳ ನೆಗೆಟಿವ್ ಶಿಥಿಲಾವಸ್ಥೆ ತಲುಪಿದೆ. 2 ರಿಂದ 3 ಸಾವಿರ ಕನ್ನಡ ಚಿತ್ರಗಳನ್ನು ಸಂರಕ್ಷಿಸುವ ಹಾಗೂ ಮುಂದಿನ ಪೀಳಿಗೆಗೆ ಕಾಯ್ದಿರಿಸುವ ಕೆಲಸ ಆಗಬೇಕಿದೆ. ಹೀಗಾಗಿ ಹಳೆಯ ಕನ್ನಡ ಚಲನಚಿತ್ರಗಳನ್ನು ಡಿಜಿಟೈಲ್ ಮಾಡಬೇಕೆಂಬ ಕನಸಿದೆ ಎಂದು ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಪ್ರೆಸ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಫೆಬ್ರುವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಅದ್ದೂರಿಯಾಗಿ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಫೆ. 24 ರಿಂದ ಮಾ. 4ರವರೆಗೆ ಚಲನಚಿತ್ರೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು. ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ರೋತ್ಸವಕ್ಕೆ ಚಾಲನೆ ದೊರೆಯಲಿದೆ. ನಂತರ ಒರಿಯನ್ ಮಾಲ್ನ 11 ಸ್ಕ್ರೀನ್ನಲ್ಲಿ ವಿವಿಧ ದೇಶಗಳ ಹಾಗೂ ವಿವಿಧ ಭಾಷೆಯ ಸುಮಾರು 200ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನ ಕಾಣಲಿದೆ. ದೇಶ-ವಿದೇಶಗಳ ನಟರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಆಹ್ವಾನ ನೀಡಲಾಗುವುದು. ಚಿತ್ರೋತ್ಸವಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ಕೊಟ್ಟಿದೆ ಎಂದರು.
ಆಕಾಡೆಮಿ ವತಿಯಿಂದ ಸಾಕಷ್ಟು ವಿನೂತನ ಕೆಲಸ ಮಾಡಬೇಕೆಂಬ ಉದ್ದೇಶ ಹೊಂದಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಅಕಾಡೆಮಿಗೆ ಬೆಂಗಳೂರಿನ ನಂದಿನಿ ಬಡಾವಣೆಯಲ್ಲಿ ಎರಡೂವರೆ ಎಕರೆ ಜಾಗ ದೊರಕಿದೆ. ಅಲ್ಲಿ ಸುಸಜ್ಜಿತವಾದ ಫಿಲ್ಮ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಬೇಕೆಂಬ ಆಸೆ ಇದೆ. ಫಿಲಂ ಕಾಂಪ್ಲೆಕ್ಸ್ನಲ್ಲಿ ನಾಲ್ಕರಿಂದ ಐದು ಚಿತ್ರಮಂದಿರ, ಚಲನಚಿತ್ರದ ಇನ್ನಿತರ ಕಾರ್ಯಕ್ರಮಗಳಿಗೆ ಅವಶ್ಯಕತೆ ಪೂರೈಸುವಂತೆ ಕಟ್ಟಡ ನಿರ್ಮಾಣವಾಗಬೇಕು. ಇದಕ್ಕೆ ಅನುದಾನ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಮುಂದಿನ ದಿನದಲ್ಲಿ ಫಿಲಂ ಕಾಂಪ್ಲೆಕ್ಸ್ನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಇನ್ನಿತರ ಅಕಾಡೆಮಿಯ ಕಾರ್ಯಕ್ರಮ ನಡೆಸುವ ಚಿಂತನೆ ಇದೆ ಎಂದು ಸುನಿಲ್ ಪುರಾಣಿಕ್ ಹೇಳಿದರು.