ಶಿವಮೊಗ್ಗ: "ಅಕ್ಟೋಬರ್ 31 ರಂದು ವಾಲ್ಮೀಕಿ ಜಯಂತಿ ಆಚರಿಸಲಾಗುತ್ತಿದೆ. ನಮ್ಮ ಸಮಾಜಕ್ಕೆ ಸಂವಿಧಾನ ಬದ್ಧವಾಗಿ ಘೋಷಣೆ ಮಾಡಿದಂತೆ ಶೇ 7.5ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡದೆ ಹೋದರೆ ರಾಜ್ಯದ ವಾಲ್ಮೀಕಿ ಸಮಾಜ ಉಗ್ರ ಹೋರಾಟ ನಡೆಸಬೇಕಾಗುತ್ತದೆ" ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ವಾಲ್ಮೀಕಿ ಸಮಾಜದ ಸಭೆ ನಡೆಸಿದ ನಂತರ ಮಾತನಾಡಿದ ಅವರು, "ನಮ್ಮ ಸಮಾಜಕ್ಕೆ ಸಂವಿಧಾನ ಬದ್ಧವಾಗಿ ಶೇ 7.5 ರಷ್ಟು ಮೀಸಲಾತಿಯನ್ನು ನೀಡುವುದಾಗಿ ಸಿಎಂ ಯಡಿಯೂರಪ್ಪ ಅಧಿಕಾರಕ್ಕೆ ಬರುವ ಮುನ್ನ ತಿಳಿಸಿದ್ದರು. ಆದರೆ, ಅಧಿಕಾರಕ್ಕೆ ಬಂದು ಇಷ್ಟು ದಿನವಾದರೂ ಸಹ ನಮ್ಮ ಬೇಡಿಕೆ ಈಡೇರಿಲ್ಲ. ಹೀಗಾಗಿ, ಅಕ್ಟೋಬರ್ 31 ರಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುವ ವಾಲ್ಮೀಕಿ ಜಯಂತಿಯಂದು ರಾಜ್ಯದ ವಾಲ್ಮೀಕಿ ಸಮಾಜ ನಿಮ್ಮ ಬಳಿ ಬರಲಿದೆ" ಎಂದು ಸಿಎಂಗೆ ಅವರು ತಿಳಿಸಿದರು.
"ಒಂದು ವೇಳೆ ಮೀಸಲಾತಿ ಘೋಷಣೆ ಆಗದೆ ಹೋದರೆ, ಮುಂದೆ ರಾಜ್ಯ ಮಟ್ಟದ ವಾಲ್ಮೀಕಿ ಸಮಾಜದ ಸಭೆ ಕರೆದು ಕಳೆದ ಬಾರಿ ಪಾದಯಾತ್ರೆ ಹೋರಾಟಕ್ಕಿಂತ ದೊಡ್ಡ ಮಟ್ಟದ ಹೋರಾಟ ರೂಪಿಸಬೇಕಾಗುತ್ತದೆ. ಅದು ಯಾವ ರೀತಿಯ ಹೋರಾಟವಾಗಿರುತ್ತದೆ ಎಂಬುದನ್ನು ಈಗ ಹೇಳೂದಿಲ್ಲ, ಮಾಡಿ ತೋರಿಸುತ್ತೇವೆ" ಎಂದರು.