ಶಿವಮೊಗ್ಗ:ಪ್ರವರ್ಗ ೧ರ ಸಮುದಾಯಕ್ಕೆ ನಿಗದಿಪಡಿಸಿರುವ ಆದಾಯಮಿತಿಯನ್ನು ರದ್ದುಪಡಿಸಬೇಕು. ಇದರಲ್ಲಿರುವ ಜಾತಿಗಳ ಅಭಿವೃದ್ಧಿಗೆ 1500 ಕೋಟಿ ರೂ. ಅನುದಾನ ಮೀಸಲಿಡುವುದು ಸೇರಿದಂತೆ ಸುಮಾರು 19 ಬೇಡಿಕೆಗಳನ್ನು ಈಡೇರಿಸಲು ಕರ್ನಾಟಕ ರಾಜ್ಯ ಪ್ರವರ್ಗ ೧ ರ ಜಾತಿಗಳ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ.
ಈ ಕುರಿತಂತೆ ನಗರದಲ್ಲಿ ಪ್ರವರ್ಗ೧ ರ ಜಾತಿಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಂಗಾಮತ, ಗೊಲ್ಲ, ಉಪ್ಪಾರ, ಮೊಗವೀರ, ಕೋಲಿ, ಬುಡುಬುಡಕಿ, ಜೋಗಿ, ದೊಂಬಿದಾಸರು, ಹಾವಾಡಿಗ, ಕುಡುವಿ, ಕುಣವಿ, ಸೂರ್ಯವಂಶ ಕ್ಷತ್ರಿಯ, ರಾವತ್, ಗೂರ್ಖ, ತೆಲುಗು ಗೌಡ, ಕಾಡುಗೊಲ್ಲ ಸೇರಿದಂತೆ ಸುಮಾರು 95 ಜಾತಿಗಳು ಮತ್ತು 379 ಉಪ ಜಾತಿಗಳು ಬರುತ್ತವೆ. ಈ ಎಲ್ಲವನ್ನು ಸೇರಿಸಿ ಪ್ರವರ್ಗ ೧ ಎಂದು ಸರ್ಕಾರ ನಿಗದಿ ಮಾಡಿದೆ. ಈಗ ಶೇ.04 ರಷ್ಟು ಮೀಸಲಾತಿ ನೀಡಿದೆ. ಆದರೆ ಈ ಮೀಸಲಾತಿ ಅತ್ಯಂತ ಕಡಿಮೆಯಿದ್ದು, ಇದು ಸಾಲದಾಗಿದೆ. ಆದ್ದರಿಂದ ಪ್ರವರ್ಗ ೧ ರ ಅಡಿ ಬರುವ ಎಲ್ಲಾ ಜಾತಿಗಳು ಕುಲಶಾಸತ್ರ ಅಧ್ಯಯನ ನಡೆಸಬೇಕು. ಇದಕ್ಕಾಗಿ 5 ಕೋಟಿ ರೂ. ಅನುದಾನ ನಿಗದಿ ಮಾಡಬೇಕೆಂದು ಒತ್ತಾಯಿಸಿದರು.
ಈ ಹಿಂದೆ ಪ್ರವರ್ಗ ೧ರ ವಿದ್ಯಾರ್ಥಿಗಳು ವಿದ್ಯಾರ್ಥಿ ಶುಲ್ಕ ಹಾಗೂ ಶೈಕ್ಷಣಿಕ ಸೌಲಭ್ಯ ಪಡೆಯಲು ಯಾವುದೇ ಆದಾಯ ಮಿತಿ ಇರಲಿಲ್ಲ. ಆದರೆ ಸರ್ಕಾರಗಳು ಈ ಆದಾಯದ ಮಿತಿಯನ್ನು ಜಾರಿಗೆ ತಂದವು. ಈ ಹಿಂದೆ ಇದ್ದಂತೆ ಆದಾಯದ ಮಿತಿಯನ್ನು ರದ್ದುಪಡಿಸಬೇಕು. ಪ್ರವರ್ಗ ೧ರ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿಯಲ್ಲಿ ಪಾಸಾದವರಿಗೆ ಬಹುಮಾನ ನೀಡಬೇಕು. ವಿದ್ಯಾರ್ಥಿಗಳಿಗಾಗಿಯೇ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಬೇಕು. ವಿದೇಶದಲ್ಲಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ಭರಿಸಬೇಕು ಎಂದು ಆಗ್ರಹಿಸಿದರು.