ಕಾಂಗ್ರೆಸ್ನಲ್ಲಿ ರಾಷ್ಟ್ರೀಯ ನಾಯಕರಿಲ್ಲ, ನಮ್ಮ ಪಕ್ಷದಲ್ಲಿ ಇದ್ದಾರೆ: ಪ್ರಹ್ಲಾದ್ ಜೋಶಿ ಶಿವಮೊಗ್ಗ: ಕಾಂಗ್ರೆಸ್ ಪಕ್ಷದಲ್ಲಿ ರಾಷ್ಟ್ರೀಯ ನಾಯಕರಿಲ್ಲ, ನಮ್ಮ ಭಾರತೀಯ ಜನತಾ ಪಕ್ಷದಲ್ಲಿ ಸಕಾಷ್ಟು ಜನ ನಾಯಕರಿದ್ದಾರೆ. ಇದರಿಂದ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರನ್ನು ನಾವು ಬಳಸಿಕೊಳ್ಳುತ್ತಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಹೆಲಿಕಾಪ್ಟರ್ ಮೂಲಕ ಶಿವಮೊಗ್ಗ ನಗರಕ್ಕೆ ಆಗಮಿಸಿದ ಪ್ರಹ್ಲಾದ್ ಜೋಶಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಗೆ ಆಗಮಿಸುತ್ತಿದ್ದಾರೆ. ಇಲ್ಲಿನ ಏರ್ಪೋರ್ಟ್ ಮಾಜಿ ಸಿಎಂ ಯಡಿಯೂರಪ್ಪನವರ ಕನಸಿನ ಯೋಜನೆಯಾಗಿದೆ. ಇದನ್ನು ಉಡಾನ್ ಯೋಜನೆ ಅಡಿ ಕಾರ್ಯಾಚರಣೆ ನಡೆಸಲು ಸಂಸದ ಬಿ.ವೈ ರಾಘವೇಂದ್ರ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಪ್ರಧಾನಿ ಮೋದಿ ಬರುತ್ತಿರುವುದು ಸಹಜವಾಗಿ ಬಿಜೆಪಿಗೆ ಅನುಕೂಲವಾಗಲಿದೆ : ನಮ್ಮ ಪಕ್ಷದ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರು ಆಗಾಗ್ಗೆ ಕರ್ನಾಟಕ ರಾಜ್ಯಕ್ಕೆ ಬರುವುದರಿಂದ ನಮ್ಮ ಪಕ್ಷಕ್ಕೆ ಸಹಜವಾಗಿಯೇ ಅನುಕೂಲಕರವಾಗುತ್ತದೆ. ಕಾಂಗ್ರೆಸ್ನ ನಾಯಕಿ ಸೋನಿಯಾ ಗಾಂಧಿ ಅವರು ವಯೋ ಸಹಜದಿಂದ ರಾಜಕೀಯದಿಂದ ನಿವೃತ್ತಿ ಘೋಷಿಸಿರಬೇಕು. ನಾನು ಅವರಿಗೆ ಮುಂದಿನ ಜೀವನಕ್ಕೆ ಶುಭಕೋರುತ್ತೇನೆ ಎಂದರು.
ಮತ ಕಡಿಮೆ ಆಗುತ್ತದೆ ಎಂದು ರಾಹುಲ್ ಗಾಂಧಿ ಬರುತ್ತಿಲ್ಲ: ನಮ್ಮ ಪಕ್ಷದಿಂದ ನಮ್ಮ ನಾಯಕರನ್ನು ಕರೆಸಿ ಬಳಸಿಕೊಳ್ಳುತ್ತೇವೆ. ಇದು ನಮ್ಮ ಪಕ್ಷಕ್ಕೆ ಅನುಕೂಲವಾಗುತ್ತದೆ. ಹಾಗೆಯೇ ಕಾಂಗ್ರೆಸ್ ಪಕ್ಷದವರು ಸಹ ಅವರ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿಯನ್ನು ಕರೆಯಿಸಲಿ. ಆದರೆ ಅವರು ಬರುವುದರಿಂದ ಮತ ಕಡಿಮೆ ಆಗುತ್ತದೆ ಎಂದು ರಾಹುಲ್ ಗಾಂಧಿ ಬರುತ್ತಿಲ್ಲ. ನಮ್ಮ ಪ್ರಧಾನಿ ನರೇಂದ್ರ ಮೋದಿ ಸಮರ್ಥರು ಹಾಗೂ ಜನಪ್ರಿಯ ನಾಯಕರು ಎಂದು ಪ್ರಹ್ಲಾದ್ ಜೋಶಿ ಸಮರ್ಥಿಸಿಕೊಂಡರು.
ಕುಟುಂಬದ ಒಳಗಿನ ರಾಜಕೀಯ ಕಿತ್ತಾಟ ಮುಗಿಸಿಕೊಂಡು ಬನ್ನಿ: ನಾನು ಕುಮಾರಸ್ವಾಮಿ ಅವರಿಗೆ ಮೊದಲು ನಿಮ್ಮ ಕುಟುಂಬದ ಒಳಗಿನ ರಾಜಕೀಯ ಕಿತ್ತಾಟ ಮುಗಿಸಿಕೊಂಡು ಬನ್ನಿ ಎಂದು ಹೇಳಿದ್ದೆ. ಅವರ ಕುಟುಂಬದವರಿಗೆ 8 ರಿಂದ 10 ಟಿಕೆಟ್ ನೀಡಿದರು ಸಹ ಇನ್ನೂ ಟಿಕೆಟ್ಗೆ ಗಲಾಟೆ ನಡೆಯುತ್ತಿದೆ. ಟಿಕೆಟ್ ಸಮಸ್ಯೆಯನ್ನು ಪರಿಹರಿಸಿಕೊಂಡು ಬಂದು ನಂತರ ರಾಜ್ಯ ರಾಜಕೀಯದ ಬಗ್ಗೆ ಚಿಂತನೆ ಮಾಡಿ ಎಂದು ಲೇವಡಿ ಮಾಡಿದರು.
ನಾಳೆ ಯಡಿಯೂರಪ್ಪನವರ ಜನ್ಮದಿನ: ಫೆಬ್ರವರಿ 27 ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಜನ್ಮದಿನ. ಇದರ ಅಂಗವಾಗಿ ನಾಳೆ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಆಗುತ್ತಿದೆ. ಇದು ಒಂದು ರೀತಿ ಪೂರ್ವ ನಿಯೋಜಿತ ಕಾರ್ಯಕ್ರಮವಾಗಿದೆ. ವಿಮಾನ ನಿಲ್ದಾಣ ನಿರ್ಮಾಣ ಮಾಡಿ ಯಡಿಯೂರಪ್ಪ ಜಿಲ್ಲೆಯ ಜನತೆಗೆ ಗಿಫ್ಟ್ ನೀಡಿದ್ದಾರೆ. ಅದೇ ರೀತಿ ಮೋದಿ ಅವರು ಇದೇ ಏರ್ಪೋರ್ಟ್ ಉದ್ಘಾಟಿಸುವ ಮೂಲಕ ಯಡಿಯೂರಪ್ಪ ಅವರಿಗೆ ಗಿಫ್ಟ್ ನೀಡಲಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದರು.
ಇದನ್ನೂ ಓದಿ:ನಾಳೆ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ: ನಗರದೆಲ್ಲೆಡೆ ರಾರಾಜಿಸುತ್ತಿರುವ ಕಮಲದ ಫ್ಲೆಕ್ಸ್