ಶಿವಮೊಗ್ಗ: ಇನ್ನು ಎರಡು ವರ್ಷಗಳಲ್ಲಿ ಭಾರತದ ನೆಲದಲ್ಲಿ ತಯಾರಾದ ಮೊಬೈಲ್‌ಗಳು ವಿಶ್ವ ಮಾರುಕಟ್ಟೆಯಲ್ಲಿ ರಾರಾಜಿಸಲಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಮಹೇಂದ್ರನಾಥ ಪಾಂಡೆ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈಗ ವಿಶ್ವ ಮಾರುಕಟ್ಟೆಯಲ್ಲಿ ಚೀನಾದಲ್ಲಿ ನಿರ್ಮಿತ ಮೊಬೈಲ್‌ಗಳು ಹೆಚ್ಚಿನ ಮಟ್ಟದಲ್ಲಿದೆ. ಶೇ. 85ರಷ್ಟು ಮೊಬೈಲ್‌ಗಳು ಅಲ್ಲಿಂದಲೇ ತಯಾರಾಗಿ ಮಾರುಕಟ್ಟೆಗೆ ಬರುತ್ತಿವೆ. ಈಗ ನರೇಂದ್ರ ಮೋದಿ ಅವರ ಸರ್ಕಾರ ದೇಶದಲ್ಲಿಯೇ ಮೊಬೈಲ್ ಉತ್ಪಾದನೆಗೆ ಆದ್ಯತೆ ನೀಡಿದೆ. ಆ್ಯಪಲ್ ಕಂಪನಿ ಸಹ ಇಲ್ಲಿಯೇ ಮೊಬೈಲ್ ಉತ್ಪಾದನೆ ಆರಂಭಿಸಿದೆ. ಇನ್ನು ಎರಡು ವರ್ಷಗಳಲ್ಲಿ ಭಾರತದಲ್ಲಿ ತಯಾರಾದ ಮೊಬೈಲ್‌ಗಳು ವಿಶ್ವಕ್ಕೇ ಸರಬರಾಜಾಗಲಿವೆ ಎಂದರು.
ದೇಶದಲ್ಲಿ ಬ್ಯಾಟರಿ ತಯಾರಿಕಾ ಘಟಕ ಇರಲಿಲ್ಲ. ಇದರ ಬಗ್ಗೆ ಯಾರೂ ಗಮನ ಹರಿಸಿರಲಿಲ್ಲ. ಇದೀಗ ಕೇಂದ್ರ ಸರ್ಕಾರ ಲಿಥೇನಿಯಂ ಬ್ಯಾಟರಿ ತಯಾರಿಕೆಗೆ ಪ್ರೋತ್ಸಾಹ ನೀಡುತ್ತಿದೆ. 100 ಗಿಗಾ ವ್ಯಾಟ್ ಲಿಥೇನಿಯಂ ಇಲ್ಲಿ ಉತ್ಪಾದನೆ ಆಗಲಿದೆ. ಇದರಿಂದ ಭಾರತದ ಸಾಮರ್ಥ್ಯ ಇನ್ನಷ್ಟು ಹೆಚ್ಚಳವಾಗಲಿದೆ ಎಂದರು. ಶಿವಮೊಗ್ಗಕ್ಕೆ ಬಂಡವಾಳ ಹೂಡಿಕೆದಾರರು ಬಾರದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ನಗರದಲ್ಲಿ ಕೋಮು ಸೌಹಾರ್ದತೆ ಕಾಪಾಡಲು ಬಿಜೆಪಿ ಆದ್ಯತೆ ನೀಡುತ್ತಿದೆ. ಇದು ನಮ್ಮ ಪ್ರಾಮುಖ್ಯತೆಯೇ ಆಗಿದೆ. ಶಿವಮೊಗ್ಗಕ್ಕೂ ಬಂಡವಾಳ ಹೂಡಿಕೆದಾರರು ಬರಲಿದ್ದಾರೆ. ಇಲ್ಲಿಯೂ ಉದ್ದಿಮೆಗಳು ಆರಂಭವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರ ಅಭಿವೃದ್ಧಿ ಫಲವಾಗಿ ಬಿಜೆಪಿಗೆ ಬಲ ನೀಡಿದ್ದು ಶಿವಮೊಗ್ಗ ಜಿಲ್ಲೆ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಸಾಮಾನ್ಯ ಕಾರ್ಯಕರ್ತ ಚನ್ನಬಸಪ್ಪ ಅವರಿಗೆ ಟಿಕೆಟ್ ನೀಡಿದೆ. ಇವರು ತಮ್ಮ 12ನೇ ವಯಸ್ಸಿನಲ್ಲಿಯೇ ತುರ್ತು ಪರಿಸ್ಥಿತಿ ವೇಳೆ ಕರಪತ್ರಗಳನ್ನು ಹಂಚಿದ್ದರು. ಅಯೋಧ್ಯೆ ಕರ ಸೇವೆಯಲ್ಲಿಯೂ ಪಾಲ್ಗೊಂಡಿದ್ದಾರೆ. ಅಂತಹ ವ್ಯಕ್ತಿಗೆ ಟಿಕೇಟ್ ನೀಡಿದೆ. ಶಿವಮೊಗ್ಗ ಸಂಘಟನೆ ಶಕ್ತಿ ಚೆನ್ನಾಗಿದೆ. ಹಾಗಾಗಿ ಇಲ್ಲಿ ಚನ್ನಬಸಪ್ಪ ಗೆಲುವು ಸಾಧಿಸಲಿದ್ದಾರೆ. ಜನತೆ ಅವರಿಂದ ಹೆಚ್ಚಿನ ಸೇವೆ ನಿರೀಕ್ಷೆ ಮಾಡಬಹುದು ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಗಿರೀಶ್ ಪಟೇಲ್, ಅಣ್ಣಪ್ಪ, ಸುನೀತಾ ಅಣ್ಣಪ್ಪ, ಸಂತೋಷ್ ಬಳ್ಳೇಕೆರೆ, ರಮೇಶ್, ಚಂದ್ರಶೇಖರ್, ಹೃಷಿಕೇಶ್ ಪೈ ಹಾಜರಿದ್ದರು.