ಶಿವಮೊಗ್ಗ: ಹುಟ್ಟುಹಬ್ಬದ ದಿನವೇ ಯುವಕ ಹಾಗೂ ಆತನ ಸ್ನೇಹಿತ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಭದ್ರಾವತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ಭದ್ರಾವತಿ ತಾಲೂಕು ಹೊನ್ನಾವಿಲೆ ಗ್ರಾಮದ ರಮೇಶ್ (23) ಹಾಗೂ ತನ್ನ ಸ್ನೇಹಿತ ಚೇತನ್ (23) ಮೃತಪಟ್ಟವರು ಎಂದು ತಿಳಿದುಬಂದಿದೆ.
ಯುವಕರು ಭದ್ರಾವತಿ ಪಟ್ಟಣಕ್ಕೆ ಹೋಗುವಾಗ ಅಲ್ಲಿನ ಹೊರವಲಯದ ಸೀಗೆಬಾಗಿ ಬಳಿ ಬೊಲೆರೋ ವಾಹನ ಹಾಗೂ ಯುವಕರಿದ್ದ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ರಮೇಶ್ ಹಾಗೂ ಚೇತನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೈಕ್ಗೆ ಡಿಕ್ಕಿ ಹೊಡೆದ ಬೊಲೆರೋ ಪಲ್ಟಿಯಾಗಿದೆ. ವಾಹನ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.